ಸಾವರಕರ ವಿರುದ್ಧದ ಆರೋಪಕ್ಕೆ ದಾಖಲೆ ನೀಡದಿದ್ದರೆ ಸಿಎಂ ಸ್ಥಾನ ತ್ಯಜಿಸಿ

New CN New
Published on

ಹುಬ್ಬಳ್ಳಿ : ಡಾ. ಬಿ.ಆರ್​. ಅಂಬೇಡ್ಕರ ಅವರು ಚುನಾವಣೆಯಲ್ಲಿ ಸೋಲಲು ಸಾವರಕರ ಕಾರಣವೆಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಹೇಳಿಕೆ ಬಗ್ಗೆ ಸೂಕ್ತ ದಾಖಲೆ ನೀಡಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು, ರಾಜಕೀಯ ಸನ್ಯಾಸ ಸ್ವೀಕರಿಸಬೇಕು ಎಂದು ವಿಧಾನ ಪರಿಷತ್​ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹೇಳಿಕೆಯೇ ನಿಜವೆಂಬುದನ್ನು ಸಾಬೀತು ಪಡಿಸಿದರೆ ನಾನು ವಿಧಾನ ಪರಿಷತ್​ ಪ್ರತಿಪಕ್ಷ ನಾಯಕ ಸ್ಥಾನ ತ್ಯಜಿಸುತ್ತೇನೆ ಎಂದು ಸವಾಲು ಹಾಕಿದರು.

ಸಚಿವ ಪ್ರಿಯಾಂಕ್​ ರ್ಖಗೆ ಹೇಳಿಕೆ ಆಧರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಳ್ಳು ಆರೋಪ ಮಾಡಿರುವುದು ಸರಿಯಲ್ಲ. ಒಬ್ಬ ಮುಖ್ಯಮಂತ್ರಿ ಏನೇ ಹೇಳಿದರೂ ಜನರು ಅದನ್ನು ನಂಬುವ ಸ್ಥಿತಿಯಲ್ಲಿ ಇರುತ್ತಾರೆ. ಹಾಗಾಗಿ, ಜನರ ದಾರಿ ತಪ್ಪಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡಬಾರದು ಎಂದರು.

ಸಿದ್ದರಾಮಯ್ಯ ಅವರು ಅಧಿವೇಶನದಲ್ಲಿ ಈ ಕುರಿತು ಮಾತನಾಡಿದಾಗಲೂ ನಾನು ಅವರನ್ನು ಸೂಕ್ತ ಸಾ ನೀಡುವಂತೆ ಒತ್ತಾಯಿಸಿದೆ. ಆದರೆ, ಅವರು ಯಾವುದೇ ಉತ್ತರ ನೀಡದೇ ಜಾರಿಕೊಂಡರು ಎಂದು ಟೀಕಿಸಿದರು.

ಮಹಾತ್ಮಾ ಗಾಂಧೀಜಿ ಅವರು ಬೆಳಗಾವಿಗೆ ಭೇಟಿ ನೀಡಿ 100 ವರ್ಷ ಆಗಿದ್ದ ಅವಧಿಯನ್ನು ಕಾಂಗ್ರೆಸ್​ನವರು ಸಂಭ್ರಮದಿಂದ ಆಚರಿಸಿದರು. ಆದರೆ, ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ ಅವರು ನಿಪ್ಪಾಣಿಗೆ ಭೇಟಿ ನೀಡಿ, ಏಪ್ರಿಲ್​ 11ಕ್ಕೆ 100 ವರ್ಷಗಳಾದವು. ಈ ಬಗ್ಗೆ ಆಚರಣೆ ಮಾಡುವುದಿರಲಿ, ಯಾವುದೇ ಹೇಳಿಕೆಯನ್ನೂ ಕಾಂಗ್ರೆಸ್​ನವರು ನೀಡುತ್ತಿಲ್ಲ. ಕಾಂಗ್ರೆಸ್​ ಮೊದಲಿನಿಂದಲೂ ಡಾ. ಅಂಬೇಡ್ಕರ ಅವರನ್ನು ತಿರಸ್ಕರಿಸುತ್ತ, ಅವರಿಗೆ ಅವಮಾನ ಮಾಡುತ್ತ ಬಂದಿದೆ ಎಂದು ಆರೋಪಿಸಿದರು.

ಕಾಂಗ್ರೆಸ್​ ಮೊದಲಿನಿಂದಲೂ ಸುಳ್ಳು ಹೇಳಿಕೆಗಳನ್ನು ನೀಡುತ್ತ ಬಂದಿದೆ. ಅದೊಂದು ಗೊಂದಲದ ಗೂಡಾದ ರಾಜಕೀಯ ಪಕ್ಷ ಎಂದು ವ್ಯಂಗ್ಯವಾಡಿದರು.

ರಾಜ್ಯ ಸರ್ಕಾರಕ್ಕೆ ಜನಗಣತಿ ಅಥವಾ ಜಾತಿ ಗಣತಿ ಮಾಡುವ ಅಧಿಕಾರ ಇಲ್ಲ. ಹಿಂದುಳಿದ, ಬಡ ವರ್ಗದವರಿಗೆ ಮೀಸಲಾತಿ ನೀಡಬಹುದೇ ಹೊರತು, ಜಾತಿ ಆಧಾರದ ಮೇಲೆ ಮೀಸಲಾತಿ ನೀಡುವ ಅವಕಾಶ ಸಂವಿಧಾನದಲ್ಲಿ ಇಲ್ಲ ಎಂದು ತಿಳಿಸಿದರು.

ಸಂವಿಧಾನ ತಿದ್ದುಪಡಿ ತರುವ ಮೂಲಕ ಮುಸ್ಲಿಂರಿಗೆ ಶೇ. 4ರಷ್ಟು ಮೀಸಲಾತಿ ನೀಡುವ ಕಾಂಗ್ರೆಸ್​ ಸರ್ಕಾರದ ಇಂಗಿತ ಮತಬ್ಯಾಂಕ ಹುನ್ನಾರದಿಂದ ಕೂಡಿದೆ. ಮುಸ್ಲಿಂರಲ್ಲಿಯೂ ಬಡ ಜನರಿದ್ದಾರೆ. ಅವರಿಗೆ ಸಹಾಯ ಮಾಡಿ. ಆದರೆ, ಜಾತಿ ಆಧಾರದ ಮೇಲೆ ಮೀಸಲಾತಿ ಸರಿಯಲ್ಲ. ದಲಿತರು ಅಸ್ಪ--ೃಶ್ಯತೆ, ದಬ್ಬಾಳಿಕೆ ಅನುಭವಿಸಿದ್ದರು. ಹೀಗಾಗಿ, ಅವರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ತರಲು ಮೀಸಲಾತಿ ನೀಡಲಾಗಿತ್ತು ಎಂದು ಹೇಳಿದರು.

ದಲಿತರ ಅಭಿವೃದ್ಧಿಗೆ ಇಟ್ಟಿದ್ದ ಸಾವಿರಾರು ಕೋಟಿ ರೂ. ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿದ್ದರೂ ಸರ್ಕಾರದಲ್ಲಿರುವ ದಲಿತ ಸಚಿವರು, ಶಾಸಕರು, ಎಐಸಿಸಿ ಅಧ್ಯಕ್ಷರು ಸಹ ಮಾತನಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆ ಏರಿಳಿತ ಆಧರಿಸಿ ಇಂಧನ ಹಾಗೂ ಅಡುಗೆ ಸಿಲೆಂಡರ್​ ಬೆಲೆ ನಿಗದಿಗೊಳ್ಳುತ್ತದೆ. ಇದರಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರ ಇಲ್ಲ. ಆದರೆ, ರಾಜ್ಯ ಕಾಂಗ್ರೆಸ್​ ಸರ್ಕಾರ ನಿತ್ಯೋಪಯೋಗಿ ವಸ್ತುಗಳ ಮೇಲಿನ ತೆರಿಗೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರಿಗೆ ಕಷ್ಟ ನೀಡುತ್ತಿದೆ ಎಂದು ದೂರಿದರು.

ಬಿಜೆಪಿ ಆಯೋಜಿಸಿರುವ ಜನಾಕ್ರೋಶ ಯಾತ್ರೆ ಈಗಾಗಲೇ ಒಂದು ಸುತ್ತಿನ ಪ್ರವಾಸ ಪೂರೈಸಿದೆ. ಎರಡನೇ ಸುತ್ತಿನ ಪ್ರವಾಸ ಬೆಳಗಾವಿಯಿಂದ ಪ್ರಾರಂಭಗೊಳ್ಳಲಿದ್ದು, ಏಪ್ರಿಲ್​ 28ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದೆ ಎಂದು ಹೇಳಿದರು.

ಬಿಜೆಪಿಯ ಕರುಣಾಕರ ಕಾಸಲಯ್ಯ, ಮಹೇಂದ್ರ ಕೌತಾಳ, ಪರಶುರಾಮ ಪೂಜಾರ, ರವಿ ನಾಯ್ಕ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net