ಪರಿಸರ ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ

If the environment is protected, it will protect us
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶದ ಮುಕ್ತ ಹಾಗೂ ಶಿಕ್ಷಣ ವಿಭಾಗ ಘಟಕಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಡಲಾಯಿತು. ಪ್ರೊ.ಬಿ.ಎಸ್. ನಾವಿ, ಡಾ.ಹನುಮಂತಯ್ಯ ಪೂಜಾರಿ, ಡಾ.ಅಮರನಾಥ ಪ್ರಜಾಪತಿ ಮತ್ತಿತರರಿದ್ದಾರೆ.
Published on

ವಿಜಯಪುರ: ಜಾಗತಿಕ ತಾಪಮಾನ ಹೆಚ್ಚಲು ಮತ್ತು ಪರಿಸರ ಮಾಲಿನ್ಯಕ್ಕೆ ನಾವುಗಳೇ ಕಾರಣಿಕರ್ತರು. ಹೀಗಾಗಿ ಪರಿಸರ ಉಳಿಸಬೇಕಿದೆ. ಪರಿಸರವನ್ನು ನಾವು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ ಎಂದು ಕುಲಸಚಿವ ಪ್ರೊ.ಬಿ.ಎಸ್. ನಾವಿ ತಿಳಿಸಿದರು.

ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶ, ಮುಕ್ತ ಹಾಗೂ ಶಿಕ್ಷಣ ವಿಭಾಗ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಟ್ಟು ಮಾತನಾಡಿದ ಅವರು, ಅತಿಯಾದ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು. ಗಿಡ ಮರಗಳನ್ನು ಬೆಳೆಸಿ ಮತ್ತು ಪ್ರೀತಿಸಿ. ಹಿಂದಿನ ಕಾಲದಲ್ಲಿ ಜನರು ಪರಿಸರ ಪ್ರೇಮಿಗಳಾಗಿದ್ದರು. ಅದರಿಂದ ಅವರು ಆರೋಗ್ಯಯುತವಾದ ಜೀವನ ಕಳೆದಿದ್ದಾರೆ ಎಂದರು.

ವಿವಿಯ ಎನ್‌ಇಪಿ ಸ್ನಾತಕ ಕೋರ್ಸ್‌ಗಳ ವಿಶೇಷ ಅಧಿಕಾರಿ ಪ್ರೊ.ರಾಜಕುಮಾರ ಮಾಲಿಪಾಟೀಲ ಮಾತನಾಡಿ, ಪರಿಸರವು ಜಗತ್ತಿನ ಜೀವಾಳ. ಪರಿಸರ ಚೆನ್ನಾಗಿದ್ದರೆ ಆರೋಗ್ಯ ಚೆನ್ನಾಗಿರುತ್ತದೆ. ಸಾಲುಮರದ ತಿಮ್ಮಕ್ಕನನ್ನು ಸ್ಫೂರ್ತಿಯಾಗಿಟ್ಟುಕೊಂಡು ಮರಗಳ ಸಂರಕ್ಷಣೆ ಮಾಡಬೇಕಾದ ಹೊಣೆಯಿದೆ ಎಂದರು.

ಉಪಕುಲಸಚಿವ ಡಾ.ಹನುಮಂತಯ್ಯ ಪೂಜಾರಿ ಮಾತನಾಡಿ, ಓಝೋನ್ ಪದರು ನಮ್ಮನ್ನು ಸೂರ್ಯನ ಕಿರಣಗಳಿಂದ ಕಾಪಾಡುತ್ತಿತ್ತು. ಇಂದು ಅದೇ ನಮ್ಮನ್ನು ವಿನಾಶ ಮಾಡುತ್ತದೆ ಎಂಬ ಭಯ ನಮ್ಮೆಲ್ಲರನ್ನು ಕಾಡುತ್ತಿದೆ. ಪ್ರಬಂಧ, ಹಾಡು, ಚಿತ್ರ, ಭಾಷಣಗಳಲ್ಲಷ್ಟೆ ಜೀವಂತವಾಗಿರುವ ಪರಿಸರ ಪ್ರೇಮ ಕಾರ್ಯರೂಪಕ್ಕಿಳಿಯಬೇಕಾದ ಅನಿವಾರ್ಯವಿದೆ ಎಂದರು.

ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ.ಅಮರನಾಥ ಪ್ರಜಾಪತಿ ಮತ್ತು ಡಾ.ಸುರೇಶ ಕೆ.ಪಿ. ಉಪಸ್ಥಿತರಿದ್ದರು. ಸಂಯೋಜನಾಧಿಕಾರಿ ಪ್ರೊ.ಶಾಂತಾದೇವಿ ಟಿ.ಪ್ರಾಸ್ತಾವಿಕ ಮಾತನಾಡಿದರು. ಡಾ.ವಿಷ್ಣು ಶಿಂದೆ ಸ್ವಾಗತಿಸಿದರು. ಡಾ. ತಹಮೀನಾ ಕೋಲಾರ ವಂದಿಸಿದರು. ಡಾ.ಕಲಾವತಿ ಕಾಂಬಳೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net