ಪರಿಸರ ಸ್ವಚ್ಛವಾದರೆ ಸಮಾಜಕ್ಕೆ ಆರೋಗ್ಯ

02 HRS 01
Published on

ಹಿರೀಸಾವೆ : ನಮ್ಮ ಸುತ್ತಮುತ್ತಲ ಪರಿಸರ ಸ್ವಚ್ಛತೆಯಿಂದ ಕೂಡಿದ್ದರೆ ಸಮಾಜವು ಆರೋಗ್ಯದಿಂದ ಇರುತ್ತದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಹೇಳಿದರು.


ಗಾಂಧಿ ಜಯಂತಿ ಪ್ರಯುಕ್ತ ಹೋಬಳಿಯ ದಿಡಗ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿ, ಆರೋಗ್ಯವೇ ಸಮಾಜದ ಆಭರಣ ಎಂದರು.


ದಿಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೆ ಬೀದಿ ದೀಪ ಅಳವಡಿಸಲಾಗಿದೆ. ಕಳೆದ ತಿಂಗಳು ಪಿ.ಹೊಸಹಳ್ಳಿ, ದಿಡಗ, ತುಮಕೂರು, ಪುರ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಚರಂಡಿಗಳ ತ್ಯಾಜ್ಯ ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.


ಅಲ್ಲದೆ ದುಸ್ಥಿತಿಯಲ್ಲಿದ್ದ ಕುಡಿಯುವ ನೀರಿನ ತೊಂಬೆಗಳ ಪ್ಲಾಟ್ ಫಾರ್ಮ್ ದುರಸ್ತಿಗೊಳಿಸಿದ್ದು, ನಲ್ಲಿ ಹಾಗೂ ನೀರು ಪೂರೈಕೆ ಮಾಡುವ ಪೈಪ್‌ಗಳನ್ನು ಬದಲಿಸಲಾಗಿದೆ. ಕೊಟ್ಟಿಗೆ ಮತ್ತು ಬದು ನಿರ್ಮಾಣ, ತೆಂಗು ನಿರ್ವಹಣೆ ಸೇರಿದಂತೆ ವಿವಿಧ ಕಾಮಗಾರಿಗೆ ಸಂಬಂದಪಟ್ಟಂತೆ ನೂರಾರು ರೈತರು ಅರ್ಜಿ ಸಲ್ಲಿಸಿದ್ದು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದರು.


ಪಿಡಿಒ ಕೆ.ಎಸ್.ಪ್ರಕಾಶ್ ಮಾತನಾಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸವಿತಾ, ಸದಸ್ಯರಾದ ಸೌಮ್ಯಾ ಗವೀಶ್, ಹರೀಶ್, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ.ಯೋಗೇಶ್, ಗ್ರಾಪಂ ಸಿಬ್ಬಂದಿ, ನೀರುಗಂಟಿಗಳು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net