ಒತ್ತುವರಿ ತೆರವು ಮಾಡಿದರೆ ಕೃಷಿಕರು ಬೀದಿಪಾಲು

25spt1
Published on

ಸೋಮವಾರಪೇಟೆ : ತಾಲೂಕಿನಲ್ಲಿ ಸಿ ಆ್ಯಂಡ್ ಡಿ ಭೂಮಿ ಒತ್ತುವರಿ ತೆರವು ಹಾಗೂ ಸೆಕ್ಷನ್-4 ಸರ್ವೇಗಾಗಿ ರಾಜ್ಯ ಸರ್ಕಾರ ಅರಣ್ಯ ವ್ಯವಸ್ಥಾಪನ ಅಧಿಕಾರಿಯನ್ನು ನೇಮಕ ಮಾಡಿರುವ ಹಿನ್ನೆಲೆಯಲ್ಲಿ ಸೋಮವಾರಪೇಟೆ ಅಭಿವೃದ್ಧಿ ಹೋರಾಟ ಸಮಿತಿ ಪದಾಧಿಕಾರಿಗಳ ನಿಯೋಗ ಸೋಮವಾರ ಮೈಸೂರಿನ ಕಚೇರಿಯಲ್ಲಿ ವ್ಯವಸ್ಥಾಪನಾ ಅಧಿಕಾರಿಯನ್ನು ಭೇಟಿಯಾಗಿ ಮಾತುಕತೆ ನಡೆಸಿತು.

ಇಲ್ಲಿನ ಜನರು ಹಲವಾರು ದಶಕಗಳಿಂದ ಸಿ ಆ್ಯಂಡ್ ಡಿ ಭೂಮಿ ಒತ್ತುವರಿ ಮಾಡಿಕೊಂಡು ವ್ಯವಸಾಯ ಮಾಡುತ್ತಿದ್ದಾರೆ. ಹಕ್ಕುಪತ್ರಕ್ಕಾಗಿ ಅನೇಕ ವರ್ಷಗಳಿಂದ ಕೃಷಿಕರು ಕಂದಾಯ ಇಲಾಖೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಸಿ ಆ್ಯಂಡ್ ಡಿ ಸರ್ಕಾರದ ಭೂಮಿ, ಅರಣ್ಯ ಇಲಾಖೆಗೆ ಸೇರಿದ್ದು ಎಂಬ ನೆಪವೊಡ್ಡಿ ಹಕ್ಕುಪತ್ರಗಳನ್ನು ನೀಡುತ್ತಿಲ್ಲ ಎಂದು ಸಮಿತಿಯ ಅಧ್ಯಕ್ಷ ಅರುಣ್ ಕೊತ್ನಳ್ಳಿ, ಅಧಿಕಾರಿ ರೇಣುಕಾಂಭ ಅವರಿಗೆ ಮನವರಿಗೆ ಮಾಡಿಕೊಟ್ಟರು.

ತಾಲೂಕಿನ ನೂರಾರು ಕುಟುಂಬಗಳಿಗೆ ಸಿ ಆ್ಯಂಡ್ ಡಿ ಭೂಮಿ ಬಿಟ್ಟರೆ ಬೇರೆ ಯಾವುದೇ ಆಸ್ತಿ ಇಲ್ಲ. ಈ ಸಂದರ್ಭದಲ್ಲಿ ಒತ್ತುವರಿ ತೆರವಿಗೆ ಕ್ರಮ ಜರುಗಿಸಿದರೆ ಕೃಷಿಕರು ಬೀದಿಪಾಲಾಗುತ್ತಾರೆ. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಬೇಜಾಬ್ದಾರಿತನದಿಂದ ಇಂದು ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸರ್ವೇ ಮಾಡಿಸಿ, ಸಿ ಆ್ಯಂಡ್ ಡಿ ಭೂಮಿಯನ್ನು ಗುರುತಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ವ್ಯವಸ್ಥಾಪನಾ ಅಧಿಕಾರಿ, ಕೆಲವೇ ದಿನಗಳಲ್ಲಿ ಸೋಮವಾರಪೇಟೆಗೆ ಆಗಮಿಸಲಿದ್ದು, ಪ್ರತ್ಯಕ್ಷ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು. ಜಂಟಿ ಸರ್ವೇ ನಡೆಯುವ ತನಕ ಅರಣ್ಯ ಇಲಾಖೆ ಒತ್ತುವರಿ ತೆರವಿಗೆ ಪ್ರಯತ್ನ ಮಾಡದಂತೆ ಸೂಚಿಸಬೇಕು ಎಂಬ ಸಮಿತಿಯ ಮನವಿಗೆ ಸ್ಪಂದಿಸಿದ ಅಧಿಕಾರಿ, ಕೊಡಗು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು.

ನಿಯೋಗದಲ್ಲಿ ಹಿರಿಯ ವಕೀಲ ಅಮೃತೇಶ್, ನಿವೃತ್ತ ತಹಸೀಲ್ದಾರ್ ಜಯರಾಮ್, ಜಿ.ಎಂ.ಹೂವಯ್ಯ, ಕೆ.ಎನ್.ದೀಪಕ್ ಆದರ್ಶ್ ತಮ್ಮಯ್ಯ, ತ್ರಿಶೂಲ್ ಹರಗ, ಆದರ್ಶ್ ಹೆಮ್ಮನಗದ್ದೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net