

ಭಟ್ಕಳ: ಸರ್ಕಾರಿ ಶಾಲೆಗಳು ಮಾದರಿ ಶಾಲೆಗಳಾಗಬೇಕು. ಇಲ್ಲಿ ಬಹುತೇಕ ಬಡವರ ಮಕ್ಕಳೇ ಹೆಚ್ಚಿದ್ದಾರೆ. ಅವರಿಗೆ ತೊಂದರೆಯಾದರೆ ನಾನು ಸಹಿಸಲ್ಲ ಎಂದು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಹೇಳಿದರು.
ಪಟ್ಟಣದ ಭಟ್ಕಳ ಅರ್ಬನ್ ಬ್ಯಾಂಕ್‌ನ ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ಶಿಕ್ಷಕರ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
ಶಾಲೆಯ ಅಭಿವೃದ್ಧಿಗೆ ಅವಶ್ಯ ಇರುವ ಸಾಮಗ್ರಿಗಳ ಕುರಿತು ಪಟ್ಟಿ ಮಾಡಿ. ಹಂತ ಹಂತವಾಗಿ ಎಲ್ಲ ಸಮಸ್ಯೆ ಪರಿಹರಿಸಲಾಗುವುದು.
ಮುಖ್ಯವಾಗಿ ಶಾಲೆಗಳಲ್ಲಿ ಅಕ್ಷರ ದಾಸೋಹ, ಶೌಚಗೃಹ, ಅಗತ್ಯ ಇರುವಲ್ಲಿ ಕೊಠಡಿ ವ್ಯವಸ್ಥೆ ಆಗಬೇಕು.
ನನ್ನ ಪೂರ್ಣ ಅನುದಾನ ಶಾಲೆಗಳಿಗೆ ವಿನಿಯೋಗವಾದರೂ ನನಗೆ ಚಿಂತೆ ಇಲ್ಲ. ಕ್ಷೇತ್ರದಲ್ಲಿ ಶೈಕ್ಷಣಿಕವಾಗಿ ಯಾವುದೇ ಕೊರತೆ ಇರಬಾರದು ಎಂದರು.
ಮನೆಯಲ್ಲೆ ಕುಳಿತು ಸಂಬಳ ತೆಗೆದುಕೊಳ್ಳುವವರ ಕುರಿತು ದೂರು ಬಂದಿವೆ. ನಾನು ಯಾರಿಗೂ ಏನನ್ನು ಹೇಳಲು ಬಯಸುವದಿಲ್ಲ. ನಿಮಗೆ ತೊಂದರೆ ಇದ್ದರೆ ಯಾವುದೇ ಕ್ಷಣದಲ್ಲೂ ಯಾರು ಬೇಕಾದರೂ ಬಂದು ನನಗೆ ಭೇಟಿಯಾಗಬಹುದು ಎಂದರು.
ಶಿಕ್ಷಕರ ವೈಯಕ್ತಿಕ ಬೇಡಿಕೆಗಳಿಗೂ ಬೆಲೆ ನೀಡುತ್ತೇನೆ. ನಿಮಗೆ ವರ್ಗಾವಣೆ ಬೇಕಿದ್ದರೆ ಅನುಕೂಲ ಮಾಡಿಕೊಡಲು ಸಿದ್ಧನಿದ್ದೇನೆ. ನಿಮಗೆ ಏನಾದರೂ ಬೇಕಿದ್ದರೆ ನೇರವಾಗಿ ನನ್ನನ್ನು ಸಂಪರ್ಕಿಸಿ. ಇದಕ್ಕೆ ನೀವು ಒಂದು ರೂಪಾಯಿಯೂ ಕೊಡಬೇಕಿಲ್ಲ.
ಯಾವುದೇ ದಲ್ಲಾಳಿ, ಏಜೆಂಟರ ಮೊರೆ ಹೋಗಬೇಡಿ. ನಾನಂತೂ ಯಾರ ಬಳಿಯೂ ಒಂದು ರೂಪಾಯಿ ಪಡೆಯದೆ ಕಾರ್ಯ ಮಾಡಿಕೊಡುತ್ತೇನೆ ಎಂದು ಒತ್ತಿ ಹೇಳಿದರು.
ಕಳೆದ ಬಾರಿ ನೀವು ಶಾಸಕರಿದ್ದಾಗ ಅರಣ್ಯ ಭೂಮಿಯಲ್ಲಿರುವ ಶಾಲೆಗಳ ಪಹಣಿ ಪತ್ರವನ್ನು ಶಾಲೆಗಳಿಗೆ ವರ್ಗಾಯಿಸಲು ಎಲ್ಲ ಪ್ರಯತ್ನ ಮಾಡಿದ್ದೀರಿ. ಜಿಪಿಎಸ್ ಸೇರಿ ಬಹುತೇಕ ಎಲ್ಲ ಪ್ರಕ್ರಿಯೆಗಳು ಮುಗಿದು ಅಂತಿಮ ಹಂತಕ್ಕೆ ಬಂದಿತ್ತು. ಬಳಿಕ 5 ವರ್ಷಗಳು ಕಳೆದರೂ ಇನ್ನೂ ಪಹಣಿ ಪತ್ರ ನಮ್ಮ ಶಾಲೆಯ ಹೆಸರಿಗೆ ವರ್ಗಾವಣೆ ಆಗಿಲ್ಲ ಎಂದು ಕಂಚಿಕೇರಿ ಶಾಲೆಯ ಮುಖ್ಯಾಪಾಧ್ಯಯ ಎಂ.ಎಲ್ ನಾಯ್ಕ ಸಮಸ್ಯೆ ಹೇಳಿದರು.
ಇದಕ್ಕೆ ಉತ್ತರಿಸಿದ ಸಚಿವ ವೈದ್ಯ, ಅಂದು ಕ್ಷೇತ್ರದ ಎಲ್ಲ ಶಾಲೆಗಳ ವಿವರ ಪಡೆದು ಅರಣ್ಯ ಭೂಮಿಯನ್ನು ಶಾಲೆಯ ಹೆಸರಿಗೆ ವರ್ಗಾವಣೆ ಮಾಡಿಸಲು ಎಲ್ಲ ಕ್ರಮ ಕೈಗೊಂಡಿದ್ದೆ. ನನ್ನ ಬಳಿಕ ಶಾಸಕರಾಗಿ ಬಂದವರು ಈ ಕುರಿತು ಒಂದೇ ಒಂದು ಸಭೆ ಕರೆದಿಲ್ಲ ಎನ್ನುವುದು ವಿಷಾದದ ಸಂಗತಿ. ಆದರೆ, ಈ ಬಾರಿ ಈ ಸಮಸ್ಯೆ ಬಗೆಹರಿಸುತ್ತೇನೆ ಎಂದರು.
ಇಒ ಪ್ರಭಾಕರ ಚಿಕ್ಕನಮನೆ, ಪ್ರಭಾರಿ ಬಿಇಒ ಶಾರದಾ ನಾಯ್ಕ, ಪ್ರಾಥಮಿಕ ಶಿಕ್ಷಕಕರ ಸಂಘದ ಅಧ್ಯಕ್ಷ ಉಲ್ಲಾಸ ನಾಯ್ಕ, ಪ್ರಾಥಮಿಕ, ಪ್ರೌಢಶಾಲೆ ಮುಖ್ಯಾಧ್ಯಾಪಕರು, ಇತರರು ಇದ್ದರು.