

ಕೇಶವಮೂರ್ತಿ ವಿ.ಬಿ. ಹಾವೇರಿ
ಕಳೆದ ವರ್ಷ ಅತಿವೃಷ್ಟಿಗೆ ಬಳಲಿ ಬೆಂಡಾಗಿದ್ದ ಜಿಲ್ಲೆಯ ರೈತರು ಈ ಬಾರಿ ಬರದ ಬೇಗೆಯಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಎರಡು, ಮೂರು ಬಾರಿ ಬಿತ್ತನೆ ಮಾಡಿದರೂ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಎದೆಯುದ್ದ ಬೆಳೆದಿದ್ದ ಗಿಡಗಳು ಒಣಗಿ ಹೋಗಿವೆ. ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಒಂದಿಲ್ಲೊಂದು ಅನಾಹುತ ಗ್ಯಾರಂಟಿ ಎಂಬ ವಾತಾವರಣ ಸೃಷ್ಟಿಯಾಗಿದೆ.
ಜೂನ್‌ನಲ್ಲಿ ಬಾರದ ಮುಂಗಾರು ಮಳೆ, ತಡವಾಗಿ ಜುಲೈನಲ್ಲಿ ಸುರಿಯಿತು. ಆದರೂ ಆಶಾಭಾವನೆಯಿಂದ ಬಿತ್ತನೆ ಮಾಡಿದ ರೈತನಿಗೆ ಆಗಸ್ಟ್‌ನಲ್ಲಿ ಮಳೆ ನಿರಾಶೆ ಮೂಡಿಸಿತು. ಜಿಲ್ಲೆಯಲ್ಲಿ ಆಗಸ್ಟ್‌ನಲ್ಲಿ ಶೇ.99ರಷ್ಟು ಅಂದರೆ 3,27,195 ಹೆಕ್ಟೇರ್ ಬಿತ್ತನೆಯಾಗಿತ್ತು. ಮೆಕ್ಕೆಜೋಳ, ಸೋಯಾಬೀನ್, ಹತ್ತಿ, ಶೇಂಗಾ, ಹೆಸರು, ಮತ್ತಿತರ ಬೆಳೆಗಳನ್ನು ಬೆಳೆಯಲಾಗಿತ್ತು. ಎದೆ ಎತ್ತರಕ್ಕೆ ಬೆಳೆ ಬೆಳೆಯಿತಾದರೂ ಫಸಲು ಕೊಡುವಷ್ಟರಲ್ಲಿ ಮಳೆ ಕಣ್ಮರೆಯಾಗಿತ್ತು. ಇದರಿಂದಾಗಿ ಬಹುತೇಕ ಬೆಳೆಗಳು ನೆಲಕಚ್ಚಿವೆ. ಅನೇಕ ರೈತರು ರೋಟಾವೇಟರ್ ಯಂತ್ರ ಹಚ್ಚಿ ಬೆಳೆ ನಾಶ ಪಡಿಸುತ್ತಿದ್ದಾರೆ.
ಈ ಬಾರಿಯಾದರೂ ಬೆಳೆ ಕೈಹಿಡಿಯಬಹುದು ಎಂಬ ಭಾವನೆಯಿಂದ ಲಕ್ಷಾಂತರ ರೂ. ಕೃಷಿಗಾಗಿ ಖರ್ಚು ಮಾಡಿದ್ದ ಅನ್ನದಾತ ಸಾಲ ತೀರಿಸಲಾಗದೇ ದಿಕ್ಕೇ ತೋಚದಂತಾಗಿದ್ದಾನೆ. ಕೆರೆ, ನದಿಗಳು ಬರಿದಾಗುತ್ತಿದ್ದು, ಜನ-ಜಾನುವಾರುಗಳಿಗೆ ಕುಡಿಯಲೂ ನೀರಿಲ್ಲದಂತಾಗಿದೆ. ಹಾಗಾಗಿ, ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಣ್ಣೀರು ಒರೆಸಬೇಕಾದ ಸರ್ಕಾರ ಜೀವದ ಜತೆ ಚೆಲ್ಲಾಟವಾಡುತ್ತಿದೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇಷ್ಟೆಲ್ಲ ಸಮಸ್ಯೆಗಳಿದ್ದರೂ ಸರ್ಕಾರ ರೈತರತ್ತ ಗಮನ ಹರಿಸುತ್ತಿಲ್ಲ. ಗ್ಯಾರಂಟಿ ಯೋಜನೆಯಲ್ಲಿ ಮುಳುಗಿರುವ ಸರ್ಕಾರ ಎಲ್ಲ ಕೆರೆಗಳಿಗೆ ನೀರು ತುಂಬಿಸುತ್ತಿಲ್ಲ. ಸಮರ್ಪಕವಾಗಿ ರೈತರಿಗೆ ವಿದ್ಯುತ್ ಪೂರೈಸುತ್ತಿಲ್ಲ. ಬರ ಘೋಷಣೆಯಲ್ಲಿ ವಿಳಂಬ ಮತ್ತು ತಾರತಮ್ಯ ನೀತಿ ಅನುಸರಿಸುತ್ತಿದೆ. ಇನ್ನಾದರೂ ಎಚ್ಚೆತ್ತುಕೊಂಡು ಕೂಡಲೇ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಬೇಕು. ನೊಂದ ರೈತರ ನೆರವಿಗೆ ಧಾವಿಸಬೇಕು ಎಂಬುದು ರೈತರ ಒಕ್ಕೊರಲ ಆಗ್ರಹವಾಗಿದೆ.
ಬರ ಪಟ್ಟಿಗೆ ಎಲ್ಲ ತಾಲೂಕು ಸೇರಿಸಿ
ರಾಜ್ಯದ 196 ತಾಲೂಕುಗಳ ಪೈಕಿ ಜಿಲ್ಲೆಯ ಕೆಲ ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಲು ಸರ್ಕಾರ ಚಿಂತಿಸಿದೆ ಎನ್ನಲಾಗಿದೆ. ಎಲ್ಲ ತಾಲೂಕುಗಳಲ್ಲೂ ಬರದ ಛಾಯೆ ಆವರಿಸಿದ್ದು, ಬರದ ಪಟ್ಟಿಗೆ ಸೇರಿಸಬೇಕು ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಒತ್ತಾಯಿಸಿದ್ದಾರೆ.
ಶೇ.78ರಷ್ಟು ಮಳೆ ಕೊರತೆ
ಜಿಲ್ಲೆಯಲ್ಲಿ ಜುಲೈನಲ್ಲಿ ಉತ್ತಮ ಮಳೆ ಆಗಿತ್ತಾದರೂ ಆಗಸ್ಟ್‌ನಲ್ಲಿ ಶೇ.78ರಷ್ಟು ಮಳೆ ಕೊರತೆಯಾಗಿದೆ. 127 ಮಿಮೀ ವಾಡಿಕೆ ಮಳೆ ನಿರೀಕ್ಷಿಸಿದ್ದು, ಕೇವಲ 27 ಮಿಮೀ ಮಳೆ ಸುರಿದಿದೆ. ಆಗಸ್ಟ್ 31ರಿಂದ ಸೆಪ್ಟೆಂಬರ್ 6ರವರೆಗೆ 17.6 ಮಿಮೀ ವಾಡಿಕೆ ಮಳೆ ಬೇಕಾಗಿದ್ದು, 15.8 ಮಿಮೀ ಮಳೆಯಾಗಿದೆ.
ಬರ ನಿರ್ವಹಣೆಗೆ ಜಿಲ್ಲೆಯಲ್ಲಿ ಹಣದ ಕೊರತೆ ಇಲ್ಲ. ಅಗತ್ಯಕ್ಕೆ ತಕ್ಕಷ್ಟು ಹಣ ಜಿಲ್ಲಾಧಿಕಾರಿ ಪಿಡಿ ಖಾತೆಯಲ್ಲಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಅಗತ್ಯಕ್ಕೆ ತಕ್ಕಂತೆ ಬಳಸಲಾಗುವುದು.I ರಘುನಂದನ ಮೂರ್ತಿ, ಜಿಲ್ಲಾಧಿಕಾರಿ ಬರ ಘೋಷಣೆ ಕಾರ್ಯ ಸರ್ಕಾರದ ಮಟ್ಟದಲ್ಲಿ ಆಗಲಿದೆ. ಬರ ಪರಿಹಾರಕ್ಕಾಗಿ ಸರ್ಕಾರದ ಸೂಚನೆ ಮೇರೆಗೆ ಇಲಾಖೆಯಿಂದ ಈಗಾಗಲೇ ಹಿರೇಕೆರೂರ, ರಟ್ಟಿಹಳ್ಳಿ ಹಾಗೂ ಸವಣೂರ ತಾಲೂಕುಗಳಲ್ಲಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲಾಗಿದೆ. ಎರಡನೇ ಹಂತದಲ್ಲಿ ರಾಣೆಬೆನ್ನೂರ ಹಾಗೂ ಹಾವೇರಿ ಸಮೀಕ್ಷೆ ಮಾಡಲಾಗುತ್ತಿದೆ. ಸರ್ಕಾರದ ಸೂಚನೆ ನಂತರ ಉಳಿದೆಡೆ ಸರ್ವೇ ಮಾಡಲಾಗುವುದು.I ಮಂಜುನಾಥ ಅಂತರವಳ್ಳಿ, ಜಂಟಿ ನಿರ್ದೇಶಕ, ಕೃಷಿ ಇಲಾಖೆ