

ಚಿಕ್ಕಮಗಳೂರು: ಎಐಸಿಸಿ ಮುಖಂಡ ರಾಹುಲ್ ಗಾಂಧಿ ಅವರನ್ನು ಬಿಜೆಪಿ ಮುಖಂಡರು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಬಿಜೆಪಿ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಬಿಜೆಪಿ ಹಿಟ್ಲರ್ ರಾಜಕಾರಣ ಮಾಡುತ್ತಿದೆ. ಅವರನ್ನು ಅಧಿಕಾರದಿಂದ ತೊಲಗಿಸಬೇಕು. ಕಾಂಗ್ರೆಸ್ ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೆ ಬಿಜೆಪಿ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಸೇವಾದಳದ ರಾಜ್ಯಾಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ, ರಾಜ್ಯದಲ್ಲಿ ಬಿಜೆಪಿಗೆ ಜನರು ತಕ್ಕ ಉತ್ತರ ನೀಡಿದ್ದಾರೆ. ಜಾತಿಗಳ ನಡುವೆ ಜಗಳ ತಂದು ಒಡೆದಾಳುವ ನೀತಿ ಅನುಸರಿಸುತ್ತಿದೆ. ಇದೇ ಕಾರಣದಿಂದ ಜನ ದಕ್ಷಿಣ ಭಾರತವನ್ನು ಬಿಜೆಪಿಮುಕ್ತ ಮಾಡಿದ್ದಾರೆ ಎಂದು ಟೀಕಿಸಿದರು.
ಈಗ ದೇಶಕ್ಕೆ ಕಾಂಗ್ರೆಸ್ ಅನಿವಾರ್ಯವಾಗಿದೆ. ನಿಂದನೆಯ ನಡುವೆಯೂ ರಾಹುಲ್ ಗಾಂಧಿ ಎದೆಗುಂದಲಿಲ್ಲ. ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿ ದೇಶದ ಪ್ರಧಾನಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ನಾವೆಲ್ಲರೂ ಅವರಿಗೆ ಬೆಂಬಲವಾಗಿ ನಿಂತಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಅಂಶುಮಂತ್ ಮಾತನಾಡಿ, ರಾಹುಲ್ ಗಾಂಧಿ ಬಡವರು, ಕಾರ್ಮಿಕರು, ಜನಸಾಮಾನ್ಯರ ದನಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದನ್ನು ಸಹಿಸದ ಬಿಜೆಪಿ ನಾಯಕರು ಅವಹೇಳನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ ನಂತರ ಹೊಸ ಮುನ್ಸೂಚನೆಗಳು ಬರಲಾರಂಭಿಸಿವೆ. ದೇಶದಲ್ಲಿ ಬಿಜೆಪಿ ಮುಕ್ತವಾಗುವ ಸನ್ನಿವೇಶ ನಿರ್ಮಾಣವಾಗುತ್ತಿದೆ. ಸಾಮಾಜಿಕ ಜಾಲತಾಣಗಳನ್ನು ಬಿಜೆಪಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಎಂ.ಎಲ್.ಮೂರ್ತಿ, ಮುಖಂಡರಾದ ಎಂ.ಸಿ.ಶಿವಾನಂದಸ್ವಾಮಿ, ಎಂ.ಡಿ.ರಮೇಶ್, ರಾಮಚಂದ್ರ, ಎಚ್.ಪಿ.ಮಂಜೇಗೌಡ, ಮಹ್ಮದ್ ಅಕ್ಬರ್, ಹನೀಫ್, ಎಸ್.ಪೇಟೆ ಸತೀಶ್, ಜಯರಾಜ ಅರಸ್, ತನೋಜ್‌ಕುಮಾರ್, ಮಧು ಇತರರಿದ್ದರು.