ವಿಧಾನಪರಿಷತ್‌ನಲ್ಲೂ ಕಾಂಗ್ರೆಸ್ ಬಲವಿದ್ದರೆ ಮಸೂದೆ ಅಂಗೀಕಾರ

KDR cong
ಕಡೂರಿನಲ್ಲಿ ವಿಧಾನಪರಿಷತ್ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರ ಸಭೆಯನ್ನು ಕಾಂಗ್ರೆಸ್ ಮುಖಂಡರು ಉದ್ಘಾಟಿಸಿದರು. ಶಾಸಕ ಕೆ.ಎಸ್.ಆನಂದ್, ಡಾ. ಅಂಶುಮಂತ್, ಶಿವಾನಂದಸ್ವಾಮಿ, ಮೋಹನ್‌ಕುಮಾರ್, ಕಲ್ಲೇಶ್, ಡಿ.ಉಮೇಶ್, ಕೆ.ಜಿ.ಶ್ರೀನಿವಾಸ್‌ಮೂರ್ತಿ ಇತರರಿದ್ದರು.
Published on

ಕಡೂರು: ವಿಧಾನಪರಿಷತ್ತಿನಲ್ಲೂ ಕಾಂಗ್ರೆಸ್ ಸದಸ್ಯರ ಬಲ ಹೆಚ್ಚಿದರೆ ಮಸೂದೆಗಳನ್ನು ಅಂಗೀಕಾರಗೊಳಿಸಲು ಸಹಕಾರಿಯಾಗಲಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಮಂಗಳವಾರ ವಿಧಾನಪರಿಷತ್ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರ ಸಭೆಯಲ್ಲಿ ಮಾತನಾಡಿ, ಸದ್ಯ ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ ಕಡಿಮೆಯಿದೆ. ಮುಂದಿನ ದಿನಗಳಲ್ಲಿ ಶಾಸಕರು ಮತದಾನ ಮಾಡಲಿರುವ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ನ 7 ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ. ಅದರ ಜತೆಗೆ ಇತರ ಕ್ಷೇತ್ರಗಳಿಂದ ಕೂಡ ಕಾಂಗ್ರೆಸ್ ಅಭ್ಯರ್ಥಿಗಳೇ ಆಯ್ಕೆಯಾಗಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯ ನೀಡುವ ಮೂಲಕ ಶಕ್ತಿ ತುಂಬಬೇಕು ಎಂದರು.
ದೇಶದ ನಾಲ್ಕು ಸದನಗಳಲ್ಲಿ ಕೆಲಸ ನಿರ್ವಹಿಸಿರುವ ಹಿರಿಮೆ ಹೊಂದಿರುವ ಆಯನೂರು ಮಂಜುನಾಥ್ ಅವರಿಗೆ ಪದವೀಧರರ ಸಮಸ್ಯೆಗಳ ಅರಿವಿದೆ. ಶಿಕ್ಷಕರ ಸಮಸ್ಯೆಗಳನ್ನು ತಿಳಿದಿರುವ ಕೆ.ಕೆ.ಮಂಜುನಾಥ್ ಅವರಿಗೂ ಅನುಭವವಿದೆ. ಇಬ್ಬರೂ ಅಭ್ಯರ್ಥಿಗಳನ್ನು ಗೆಲ್ಲಿಸಲು ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಅಂಶುಮಂತ್ ಮಾತನಾಡಿ, ಕಾಂಗ್ರೆಸ್ ವಿಧಾನಪರಿಷತ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಕಾರ್ಯಕರ್ತರೂ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ವಿಧಾನಪರಿಷತ್ ಚುನಾವಣೆಯಲ್ಲಿ ನಾವೆಲ್ಲರೂ ಮೈ ಮರೆಯದೆ ಮತದಾರರ ಮನವೊಲಿಸಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತಹಾಕಿಸಲು ಪರಿಶ್ರಮ ಹಾಕಬೇಕು ಎಂದರು.
ಪಕ್ಷದ ಚುನಾವಣಾ ವೀಕ್ಷಕ ಪಿ.ಒ.ಶಿವಕುಮಾರ್, ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಸಂಧಿ ಕಲ್ಲೇಶ್, ಪುರಸಭೆ ಸದಸ್ಯ ತೋಟದಮನೆ ಮೋಹನ್‌ಕುಮಾರ್, ರೇವತಿ ನಾಗರಾಜ್, ಮುಖಂಡರಾದ ಕೆ.ಜಿ.ಶ್ರೀನಿವಾಸ್‌ಮೂರ್ತಿ, ದಾಸಯ್ಯನಗುತ್ತಿ ಚಂದ್ರಪ್ಪ, ಪ್ರಕಾಶ್ ನಾಯ್ಕ, ಮುಬಾರಕ್, ಜಿ.ಪ್ರಭುಕುಮಾರ್, ಪ್ರಸನ್ನ, ಎಂ.ಆರ್.ಟಿ.ಸುರೇಶ್, ಎಂ.ಎಚ್.ಚಂದ್ರಪ್ಪ, ಡಿ.ಉಮೇಶ್, ಪಂಚಾಕ್ಷರಿ, ಗೋವಿಂದಪ್ಪ, ರವಿ, ಎನ್.ಬಷೀರ್ ಸಾಬ್, ಯರದಕೆರೆ ಓಂಕಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net