

ಬೆಳಗಾವಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ವೆಚ್ಚ ವೀಕ್ಷಕರು ನಗರದ ವಾರ್ತಾ ಭವನದಲ್ಲಿ ಸ್ಥಾಪಿಸಲಾಗಿರುವ ಮಾಧ್ಯಮ ಕಣ್ಗಾವಲು ಘಟಕಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
ಬೆಳಗಾವಿ ಲೋಕಸಭಾ ಕ್ಷೇತ್ರದ ವೆಚ್ಚ ವೀಕ್ಷಕ ಹರಕ್ರಿಪಾಲ್ ಖಟಾನಾ ಮಾತನಾಡಿ, ದಿನಪತ್ರಿಕೆ, ಟಿವಿ ಚಾನಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಪ್ರತಿಯೊಂದು ಚುನಾವಣಾ ಸುದ್ದಿ ಹಾಗೂ ಜಾಹೀರಾತುಗಳ ಮೇಲೆ ನಿಗಾವಹಿಸಬೇಕು ಎಂದು ತಿಳಿಸಿದರು. ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳ ಚುನಾವಣಾ ಜಾಹೀರಾತುಗಳಿಗೆ ಸಂಬಂಧಿಸಿದ ವೆಚ್ಚವನ್ನು ಸಹಾಯಕ ವೆಚ್ಚ ನೋಡಲ್ ಅಧಿಕಾರಿಗಳ ಗಮನಕ್ಕೆ ತರಬೇಕು. ಮಾದರಿ ನೀತಿಸಂಹಿತೆ ಉಲ್ಲಂಘನೆ ಕಂಡುಬಂದರೆ ಅಂತಹ ವಿಷಯಗಳನ್ನು ಕೂಡ ಎಂಸಿಸಿ ನೋಡಲ್ ಅಧಿಕಾರಿಗಳ ಅವಗಾಹನೆಗೆ ತರಬೇಕು ಎಂದರು.
ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ (ಎಂಸಿಎಂಸಿ)ಯ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ ನೋಡಲ್ ಅಧಿಕಾರಿ ಗುರುನಾಥ ಕಡಬೂರ, ಪ್ರತಿಯೊಂದು ದಿನಪತ್ರಿಕೆಗಳು, ಟಿವಿ ಚಾನಲ್ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಲಾಗಿರುತ್ತದೆ ಎಂದರು.
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವೆಚ್ಚ ವೀಕ್ಷಕ ಎನ್.ಮೋಹನ್ ಕೃಷ್ಣಾ, ಅಂಕಿತ ತಿವಾರಿ, ಐಎಎಸ್ ಪ್ರೊಬೇಷನರಿ ಅಧಿಕಾರಿ ಶುಭಂ ಶುಕ್ಲಾ, ಮಾಧ್ಯಮ ಘಟಕದ ಉಸ್ತುವಾರಿ ಶ್ರೀಮತಿ ಝೆಡ್.ಜಿ. ಸಯ್ಯದ್, ವಿ.ಎಂ. ಕಂಗ್ರಾಳಕರ, ಎಂ.ಎಂ. ಪಾಟೀಲ, ಎಸ್.ಎಸ್. ಘೋರ್ಪಡೆ, ಎ.ಬಿ. ಕಾಮಣ್ಣವರ, ಎಂ.ಪಿ.ನಿಚ್ಚಣಕಿ, ಮಹಾಂತೇಶ ಪತ್ತಾರ ಇತರರಿದ್ದರು.