

ಮದ್ದೂರು: ತಾಲೂಕಿನ ಅಗರಲಿಂಗನದೊಡ್ಡಿ ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ನೂತನ ಕಟ್ಟಡ ನಿರ್ಮಾಣ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದ ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಎಚ್ಚರಿಕೆ ನೀಡಿದರು.
ಅಗರಲಿಂಗನದೊಡ್ಡಿ ಗ್ರಾಮದಲ್ಲಿ ನಡೆಯುತ್ತಿರುವ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಅಧಿಕಾರಿಗಳೊಂದಿಗೆ ಸೋಮವಾರ ಆಗಮಿಸಿ ಕಾಮಗಾರಿ ವಿಳಂಬಕ್ಕೆ ಕಾರಣಗಳೆನು ಎಂಬುವುದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.
ಶಾಲಾ ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸಿ ವಿದ್ಯಾರ್ಥಿಗಳ ಕಲಿಕೆಗೆ ಅನುವು ಮಾಡಿಕೊಡಬೇಕೆಂದು ಉಚ್ಚ ನ್ಯಾಯಾಲಯ ಆದೇಶ ಹೊರಡಿಸಿದ್ದರೂ ಗುತ್ತಿಗೆದಾರರು ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸದ ಕುರಿತು ಸ್ಥಳದಲ್ಲಿದ್ದ ಗುತ್ತಿಗೆದಾರ ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕಟ್ಟಡ ಕಾಮಗಾರಿಗೆ ಜ.31ರಂದು ಭೂಮಿಪೂಜೆ ಮಾಡಲಾಗಿತ್ತು. ಜು. 31ರಂದು ಕಾಮಗಾರಿ ಮುಗಿಸಿ ಉದ್ಘಾಟನೆಗೊಳ್ಳಬೇಕಿತ್ತು. ಆದರೆ ಗುತ್ತಿಗೆದಾರ ಹಾಗೂ ಸಂಬಂಧಿಸಿದ ಅಧಿಕಾರಿಗಳ ಬೇಜವಾಬ್ದಾರಿಯಿಂದ ವಿಳಂಬವಾಗುತ್ತಿದೆ. ಈ ಸಂಬಂಧ ಉಚ್ಚ ನ್ಯಾಯಾಲಯ ವಿಳಂಬಕ್ಕೆ ಕಾರಣಗಳೆನು ಏನು ಎಂಬುವುದರ ಬಗ್ಗೆ ಜಿಲ್ಲಾಡಳಿತಕ್ಕೆ ನೋಟಿಸ್ ಜಾರಿ ಮಾಡಿದ್ದು, ಸೆ.14ರಂದು ಮತ್ತೆ ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಆ.7 ರಂದು ಕಟ್ಟಡ ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳುವಂತೆ ತಾಕೀತು ಮಾಡಿದರು.
ಶಾಲಾ ಕಟ್ಟಡ ಉದ್ಘಾಟನೆಗೊಂಡ ಎರಡು ತಿಂಗಳೊಳಗೆ ಕಾಂಪೌಂಡ್, ರಸ್ತೆ ಹಾಗೂ ಆಟದ ಮೈದಾನವನ್ನು ನರೇಗಾ ಯೋಜನೆಯಡಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಶಾಸಕ ಕೆ.ಎಂ.ಉದಯ್ ಮಾತನಾಡಿ, ಸರ್ಕಾರಿ ಶಾಲೆಗಳಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬದವರಿಗೆ ತುಂಬಾ ಅನುಕೂಲವಾಗುತ್ತಿದೆ ಮತ್ತು ಸರ್ಕಾರ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸೌಲಭ್ಯ ನೀಡುತ್ತಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಶಾಲಾ ಕಟ್ಟಡವನ್ನು ಶೀಘ್ರವಾಗಿ ನಿರ್ಮಿಸಬೇಕು ಎಂದರು.
ಜಿ.ಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಾಪಂ ಇಒ ರಾಮಲಿಂಗಯ್ಯ, ಬಿಇಒ ಕಾಳೀರಯ್ಯ, ಲೋಕೋಪಯೋಗಿ ಇಲಾಖೆ ಎಇ ದಿವ್ಯಾ, ಸಹಾಯಕ ನಿರ್ದೇಶಕ (ನರೇಗಾ) ಮಂಜುನಾಥ್, ಎಸ್‌ಡಿಎಂಸಿ ಅಧ್ಯಕ್ಷ ಸಂತೋಷ್, ಗ್ರಾ.ಪಂ ಸದಸ್ಯರಾದ ಶಂಕರ್, ಹನುಮೇಗೌಡ, ಸುಜಾತಾ, ಮುಖಂಡರಾದ ಮಹೇಶ್, ಪುಟ್ಟಪ್ಪ, ಬೊಮ್ಮಯ್ಯ, ತಿಮ್ಮಪ್ಪ, ಸತೀಶ್ ಇತರರು ಇದ್ದರು.