

ಹಗರೆ: ನಮ್ಮ ಜೀವನದ ಎಲ್ಲ ವಿಷಯಗಳಲ್ಲೂ ಸಂಸ್ಕೃತ ತುಂಬಿದೆ. ಸಂಸ್ಕೃತ ಭಾಷೆ ಅಳಿದರೆ ಮನುಷ್ಯ ಸಂಕುಲವೆ ಅಳಿದಂತೆ ಎಂದು ಸಂಸ್ಕೃತ ವಿದ್ವಾಂಸ ರಾಮಸ್ವಾಮಿ ಅಯ್ಯಂಗಾರ್ ತಿಳಿಸಿದರು.
ಹಗರೆ ಸಮೀಪದ ಹುಲುಗುಂಡಿ ಗ್ರಾಮದಲ್ಲಿ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಹಾಗೂ ಉಭಯ ಭಾರತಿ ವಿದ್ಯಾಮಂದಿರ ಪಾಠಶಾಲೆ ವತಿಯಿಂದ ಆಯೋಜಿಸಲಾಗಿದ್ದ ‘ಅಸ್ಮಾಕಂ ಸಂಸ್ಕೃತಂ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಸ್ಕೃತ ಭಾಷೆ ಎಲ್ಲ ಭಾಷೆಗಳ ತಾಯಿ ಭಾಷೆ. ರಾಮಾಯಣ ಮಹಾಭಾರತದಂತಹ ಮಹಾಕಾವ್ಯಗಳು ಸಂಸ್ಕೃತದಲ್ಲಿಯೇ ಅಡಗಿವೆ. ಸಂಸ್ಕೃತ ಭಾಷೆಯಲ್ಲಿರುವ ಆಯುರ್ವೇದ ವಿಜ್ಞಾನದಿಂದ ಇಂದು ನಾವು ಮನೆಯಲ್ಲಿಯೇ ಸಿಗುವ ವಸ್ತುಗಳಿಂದ ಔಷಧವನ್ನು ತಯಾರಿಸಿಕೊಂಡು ಆರೋಗ್ಯಪೂರ್ಣ ಜೀವನವನ್ನು ನಡೆಸಲು ಸಹಕಾರಿಯಾಗಿದೆ ಎಂದರು.
ಸಂಸ್ಕೃತ ಭಾಷೆ ಕೇವಲ ಯಾವುದೋ ಒಂದು ಜನಾಂಗಕ್ಕೆ ಸೇರಿದ ಭಾಷೆಯಾಗಿಲ್ಲ. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಇಂದು ಸಂಸ್ಕೃತದ ಬಗ್ಗೆ ಸಾಕಷ್ಟು ಅಧ್ಯಯನ ನಡೆಯುತ್ತಿದೆ ಎಂದ ಅವರು, ಕಂಪ್ಯೂಟರ್ ಕ್ಷೇತ್ರದಲ್ಲೂ ಸಂಸ್ಕೃತದ ಅವಶ್ಯಕತೆ ಇದೆ. ನಾವು ಸಂಸ್ಕೃತವನ್ನು ನಮ್ಮ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕಾದ ಸಂದರ್ಭ ಹಾಗೂ ಅವಶ್ಯಕತೆ ನಮ್ಮ ಮುಂದಿದೆ ಎಂದು ತಿಳಿಸಿದರು.
ಹುಲುಗುಂಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವರಾಜ್ ಮಾತನಾಡಿ, ಸಂಸ್ಕೃತ ಪ್ರಾಚೀನ ಭಾಷೆ. ಕಾಲ ಕಳೆದಂತೆ ಮೊಗಲರೂ, ಬ್ರಿಟಿಷರ ದಬ್ಬಾಳಿಕೆಯಿಂದ ಇಂದು ಅವನತಿಗೆ ಬಂದು ತಲುಪಿದೆ ಎಂದು ಬೇಸರ ವ್ಯಕ್ತಪಡಿಸಿದರು. ನಮ್ಮ ಸಂಸ್ಕೃತ ಭಾಷೆಯನ್ನು ಉಳಿಸಲು ನಾವು ಈ ರೀತಿ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸುವುದು ಅವಶ್ಯಕ ಎಂದು ತಿಳಿಸಿದರು.
ಹುಲುಗುಂಡಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಲಕ್ಷ್ಮೀನಾರಾಯಣ ಭಟ್, ಸಂಸ್ಕೃತ ಪಾಠಶಾಲಾ ಮುಖ್ಯ ಶಿಕ್ಷಕಿ ನಿವೇದಿತಾ, ಶಿಕ್ಷಕರಾದ ಲಕ್ಷ್ಮೀಕಾಂತ್, ಸುಮನ್ ಕುಮಾರಿ, ಹರೀಶ್, ಹೀರೇಗೌಡ, ಗ್ರಾಮಸ್ಥರಾದ ಅರುಣ್, ಗೋಪಿ ಇತರರಿದ್ದರು.