

ಮೈಸೂರು: ಮೂಢನಂಬಿಕೆ ಬಿಟ್ಟು ವೈಚಾರಿಕತೆಯನ್ನು ಮೈಗೂಡಿಸಿಕೊಳ್ಳದಿದ್ದರೆ ತುಳಿತಕ್ಕೆ ಒಳಗಾದ ಜನರು ಮತ್ತೊಂದು ಶತಮಾನ ಕಂಡರೂ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕಿವಿಮಾತು ಹೇಳಿದರು.
ನಗರದ ಕಲಾಮಂದಿರದಲ್ಲಿ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗುತ್ತಿಗೆ ಪೌರ ಕಾರ್ಮಿಕರಿಗೆ ನೇರ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಿ ಮಾತನಾಡಿ, ಸಮಾಜದಲ್ಲಿ ತುಳಿತಕ್ಕೆ ಒಳಗಾದ, ನಿಕೃಷ್ಟವಾಗಿ ಬದುಕುತ್ತಿರುವ ಜನರು ದೇಶದಲ್ಲಿ ಸಾಕಷ್ಟು ಜನರು ಇದ್ದಾರೆ. ಇವರು ದುಡಿದು ತಿಂದರೆ ಮಾತ್ರ ಜೀವನ. ಆದರೆ ಮೇಲ್ವರ್ಗ ಎನಿಸಿಕೊಂಡಿರುವ ಶೇ.2ರಿಂದ 3 ರಷ್ಟು ಜನಸಂಖ್ಯೆ ಇರುವವರು ಕೆಳವರ್ಗದ ಜನರನ್ನು ಒಡೆದು ಆಳುತ್ತಿದ್ದಾರೆ. ಇದಕ್ಕೆಲ್ಲ ಮುಕ್ತಿ ಸಿಗಬೇಕು ಎಂದರೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಹೇಳಿದರು.
ಐಪಿಡಿ ಸಾಲಪ್ಪ ಅವರು ಪೌರಕಾರ್ಮಿಕರ ಅಭ್ಯುದಯಕ್ಕಾಗಿ ಸಾಕಷ್ಟು ಶ್ರಮಿಸಿ ಹೋರಾಟ ಮಾಡಿದ್ದರು. ಅವರು ಸರ್ಕಾರಕ್ಕೆ ಸಲ್ಲಿಸಿದ ವರದಿಯಂತೆ ನಗರಗಳಲ್ಲಿ ವಾಸಿಸುತ್ತಿರುವ ಪ್ರತಿ 500 ಜನಸಂಖ್ಯೆಗೆ ಒಬ್ಬ ಪೌರಕಾರ್ಮಿಕ ಇರಬೇಕು ಎಂದಿದೆ. ಆದರೆ ಮಹಾನಗರಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪೌರಕಾರ್ಮಿಕರಿಲ್ಲ. ರಾಜ್ಯ ಸರ್ಕಾರ ಇದಕ್ಕೆ ಒತ್ತು ಕೊಟ್ಟು ಪೌರ ಕಾರ್ಮಿಕರ ನೇರ ನೇಮಕಾತಿ ಮಾಡಿಕೊಳ್ಳುತ್ತಿದೆ. 2017ರಿಂದ ಗುತ್ತಿಗೆ ಆಧಾರದ ಮೇಲೆ ಪೌರಕಾರ್ಮಿಕರನ್ನು ನೇಮಕಾತಿ ಮಾಡಿಕೊಳ್ಳುವುದನ್ನು ನಿಲ್ಲಿಸಿದೆ. ಪೌರಕಾರ್ಮಿಕರು ಊರನ್ನೇ ಸ್ವಚ್ಛತೆ ಮಾಡುತ್ತಾರೆ. ನಗರದ ನೈರ್ಮಲ್ಯ ಕಾಪಾಡಲು ಶ್ರಮಿಸುತ್ತಾರೆ. ಆದರೆ ಅವರ ಕಷ್ಟಗಳನ್ನು ಯಾರೂ ಕೇಳುವುದಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಪೌರಕಾರ್ಮಿಕರ ಕಷ್ಟಗಳಿಗೆ ಸ್ಪಂದಿಸುತ್ತಿದೆ. ಸ್ವಚ್ಛತೆ ನಿಮ್ಮ ಜವಾಬ್ದಾರಿ ಆದರೆ ನಿಮ್ಮ ಯೋಗಕ್ಷೇಮ ಕಾಪಾಡುವುದರ ಜತೆಗೆ ಶಿಕ್ಷಣ, ಆರೋಗ್ಯ, ವಸತಿ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ನೀಡುವುದು ಸರ್ಕಾರದ ಹೊಣೆ ಎಂದು ತಿಳಿಸಿದರು.
ಶಾಸಕ ತನ್ವೀರ್ ಸೇಠ್ ಮಾತನಾಡಿದರು. ಶಾಸಕ ಕೆ.ಹರೀಶ್‌ಗೌಡ, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಮರಿತಿಬ್ಬೇಗೌಡ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಪಾಲಿಕೆ ಆಯುಕ್ತ ಅರ್ಸದ್ ಉರ್ ರೆಹಮಾನ್ ಇತರರಿದ್ದರು.
ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ 172 ಪೌರ ಕಾರ್ಮಿಕರಿಗೆ ನೇರ ನೇಮಕಾತಿ ಆದೇಶ ಪತ್ರವನ್ನು ಸಚಿವರು ವಿತರಿಸಿದರು.
ಸಫಾಯಿ ಕರ್ಮಚಾರಿಗಳಿಗೆ ಬ್ಯಾಂಕ್‌ನಿಂದ ಸಾಲ ಸೌಲಭ್ಯಗಳನ್ನು ಒದಗಿಸಬೇಕು, ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಪಾಲಿಕೆ ಸ್ವಚ್ಛತಾ ವಾಹನ ಚಾಲಕರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.