

ಶಿವಮೊಗ್ಗ: ಮಹಾತ್ಮ ಗಾಂಧಿ ನೆಲೆಸಿದ ನಾಡಲ್ಲಿ ಮೊದಲು ಶಾಂತಿಯಿಂದ ಪಾಕಿಸ್ತಾನ ವಿರುದ್ಧ ಹೋರಾಟ ಮಾಡಬೇಕು. ಶಾಂತಿಮಂತ್ರಕ್ಕೂ ಜಗ್ಗದಿದ್ದಾಗ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮಾದರಿಯಲ್ಲಿ ಯುದ್ಧ ಮಾಡಬೇಕು ಎಂದು ಸಚಿವ ಮಧು ಬಂಗಾರಪ್ಪ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಕಾಶ್ಮೀರದ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಮೇಲೆ ಯುದ್ಧಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಇನ್ನೇನು ಯುದ್ಧ ನಡೆದೇಹೋಯಿತು ಎನ್ನುವಷ್ಟರ ಮಟ್ಟಿಗೆ ರಫೆಲ್ ಬಂದೇಬಿಟ್ಟಿತೆಂದು ಬಿಜೆಪಿಯವರು ಜನರನ್ನು ಮರಳು ಮಾಡುತ್ತಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ಎರಡು ಗಂಟೆ ನಂತರ ಸೈನಿಕರು ಅಲ್ಲಿಗೆ ಬಂದಿದ್ದರು. ಸೈನಿಕರ ಕೊರತೆ ಇದಕ್ಕೆ ಕಾರಣ. ಕಳೆದ ಎರಡು ವರ್ಷದಿಂದ ಸೈನಿಕರ ನೇಮಕಾತಿಯೇ ಆಗಿಲ್ಲ. ಯೋಧರ ನೇಮಕಾತಿ ಮಾಡಿಲ್ಲ ಎಂದರೆ ದೇಶವನ್ನು ಕಾಯುವವರು ಯಾರು ಎಂದು ಪ್ರಶ್ನಿಸಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನಗಳ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಪ್ರಮುಖರಾದ ಕಲೀಂ, ಮಧುಸೂಧನ್ ಸುದ್ದಿಗೋಷ್ಠಿಯಲ್ಲಿದ್ದರು.