

ರಾಯಬಾಗ: ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘಗಳಿಂದ ಶಿಕ್ಷಕರಿಗೆ ಬಲ ಬಂದಿದ್ದು, ಶಾಲೆಗಳಿಗೆ ಸಾಕಷ್ಟು ಅನುದಾನ ಹರಿದು ಬರುತ್ತಿದೆ. ಇದು ಶಿಕ್ಷಕರ ಸಂಘಗಳ ಪ್ರಯತ್ನದ ಫಲವಾಗಿದೆ ಎಂದು ಸಾ.ಶಿ.ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಗಜಾನನ ಮನ್ನಿಕೇರಿ ಹೇಳಿದರು.
ಪಟ್ಟಣದ ದತ್ತ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಬೆಳಗಾವಿ ವಿಭಾಗದ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಿಕ್ಷಕರ ಸಮಸ್ಯೆ ಪರಿಹರಿಸಲು ಹಾಗೂ ಅವರ ಹಿತ ಕಾಪಾಡಲು ಸಂಘಟನೆಗಳು ಅವಶ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾತನಾಡಿದ್ದ ಸಂಸ್ಥಾಪಕ ಅಧ್ಯಕ್ಷ ಶ್ರೀಮಂತ ಸಲಗರೆ, ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘವು ನ್ಯಾಯಾಲಯದಲ್ಲಿ ನಿರಂತರ ಹೋರಾಟದ ಮೂಲಕ ಪ್ರಾಥಮಿಕ ಶಾಲೆ ಪದವೀಧರ ಶಿಕ್ಷಕರಿಗೆ ಶೇ.50 ಬಡ್ತಿ ಪಡೆದುಕೊಳ್ಳಲು ಸಾಧ್ಯವಾಗಿದೆ. ಶಿಕ್ಷಕರು ಸಂಘಟಿತರಾದರೆ ಸರ್ಕಾರಿ ಸೌಲಭ್ಯ ಪಡೆಯಲು ಸಾಧ್ಯವೆಂದರು.
ಸಾನ್ನಿಧ್ಯ ವಹಿಸಿದ್ದ ಪರಮಾನಂದವಾಡಿ ಡಾ. ಅಭಿನವ ಬ್ರಹ್ಮಾನಂದ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲಸಬೇಕಾದರೆ ಪ್ರಾಥಮಿಕ ಶಾಲೆಗಳನ್ನು ಸುಧಾರಿಸಬೇಕೆಂದರು. ಬೆಳಗಾವಿ ವಿಭಾಗದ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ರಜತ ಮಹೋತ್ಸವ ಅಂಗವಾಗಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಬಿಇಒ ಬಸವರಾಜಪ್ಪ ಆರ್., ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ ಮೊರಬದ, ಎಂ.ಬಿ.ಕಮ್ಮಾರ, ನಿರಂಜನ ಮೆಳವಂಕಿ, ಎಸ್.ಎಲ್.ಯಕ್ಕಂಚಿ, ಎಂ.ಆರ್.ಗುರವ, ಬಿ.ಜಿ.ಮೊಗಲಿ, ಎನ್.ಆರ್.ಪಾಟೀಲ, ಎಂ.ವೈ.ಪಾಟೀಲ, ಬಿ.ಜಿ.ಸಾಂಗಲಿ ಇತರರಿದ್ದರು.