

ಶೃಂಗೇರಿ: ಪ್ರಕೃತಿ ನಾಶಕ್ಕೆ ಪ್ರಸ್ತುತ ಮಾನವನ ದುರಾಸೆ ಮೂಲಕಾರಣ ಎಂದು ತಾಪಂ ಇಒ ಸುದೀಪ್ ಹೇಳಿದರು.
ಅಂತರಾಷ್ಟ್ರೀಯ ಜೈವಿಕ ದಿನಾಚರಣೆ ಪ್ರಯುಕ್ತ ಸಾಮಾಜಿಕ ಅರಣ್ಯ ಇಲಾಖೆ, ತಾಪಂ ಹಾಗೂ ವಿವಿಧ ಇಲಾಖೆ ಸಹಯೋಗದಲ್ಲಿ ವೈಕುಂಠಪುರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ತಾಯಿ ಹೆಸರಿನಲ್ಲಿ ಒಂದು ಗಿಡ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಕೃತಿ ಮೇಲೆ ನಡೆಯುವ ನಿರಂತರ ದೌರ್ಜನ್ಯದಿಂದ ಅತಿಯಾದ ಮಳೆ, ಭೂ ಕುಸಿತ ಸಂಭವಿಸುತ್ತಿದೆ. ವಿದ್ಯಾರ್ಥಿಗಳಿಗೆ ಪ್ರಕೃತಿ ಪ್ರೇಮ ಪರಿಮೂಡಬೇಕಾದರೆ ಪ್ರತಿಯೊಂದ ಸಸಿಗಳ ಕುರಿತು ಅರಿವು ಮೂಡಿಸಬೇಕಿದೆ ಎಂದರು.
ತಾಯಿ ಹೆಸರಿನಲ್ಲಿ ಪ್ರತಿಯೊಬ್ಬರೂ ಒಂದೊಂದು ಸಸಿ ನೆಟ್ಟು ಅದನ್ನು ಆರೈಕೆ ಮಾಡಬೇಕು. ಅರಣ್ಯ ಪ್ರದೇಶಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಪರಿಸರ ಕಾಳಜಿಯಿಂದ ಗಿಡಗಳನ್ನು ಪೋಷಣೆ ಮಾಡಬೇಕು.ಪ್ರಕೃತಿ ನಾಶವಾದರೆ ಭವಿಷ್ಯತ್ತಿನಲ್ಲಿ ಅಂರ್ತಜಲದ ಮಟ್ಟ ಇಳಿಮುಖವಾಗುತ್ತದೆ ಎಂದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವರಾತ್ರೇಶ್ವರ ಸ್ವಾಮಿ ಮಾತನಾಡಿ, ದಿನ ನಿತ್ಯದ ಕಾರ್ಯಗಳಲ್ಲಿ ಮೂಲ ಸೌಕರ್ಯಗಳಿಗೆ ನಾವು ಆದ್ಯತೆ ನೀಡುತ್ತೇವೆ. ಹವಾಮಾನ ವೈಪರೀತ್ಯದಿಂದ ದಿನದಿಂದ ದಿನಕ್ಕೆ ಪರಿಸರದಲ್ಲಿ ಬದಲಾವಣೆ ಕಾಣುತ್ತಿದ್ದೇವೆ. ಪ್ರಕೃತಿ ಮಾತೆ ನಮಗೆ ಎಲ್ಲವನ್ನೂ ನೀಡುತ್ತಿದ್ದಾಳೆ. ಹಾಗಾಗಿ ನಾವು ಕೂಡ ಪ್ರಕೃತಿ ಋಣ ತೀರಿಸಲು ಬದ್ಧರಾಗಿರಬೇಕು ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಮುತ್ತಣ್ಣ, ಸದಸ್ಯರಾದ ರಮೇಶ್, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀಕೃಷ್ಣ ಇದ್ದರು.