

ವಿಜಯವಾಣಿ ಸುದ್ದಿಜಾಲ ಧಾರವಾಡ
ದ.ರಾ.ಬೇಂದ್ರೆ ಅವರ ಸಾಹಿತ್ಯವು ಸತ್ವಯುತವಾಗಿದೆ. ಎಲ್ಲ ಕಾಲ ಘಟ್ಟದಲ್ಲೂ ಇಷ್ಟವಾಗುತ್ತದೆ. ಅವರ ನಾಕುತಂತಿ ಕೃತಿಯು ಜನ ಮನ್ನಣೆ ಗಳಿಸಿದೆ ಎಂದು ಸಾಹಿತಿ ಸುನಾಥ ದೇಶಪಾಂಡೆ ಹೇಳಿದರು.
ನಗರದ ಜಿ.ಬಿ.ಜೋಶಿ ಮೆಮೋರಿಯಲ್ ಟ್ರಸ್ಟ್, ರಂಗಾಯಣ ಹಾಗೂ ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಇಲ್ಲಿನ ಸುವರ್ಣ ಸಮುಚ್ಚಯ ಭವನದಲ್ಲಿ ಏರ್ಪಡಿಸಿದ್ದ ನಾಕುತಂತಿ - ಚಿನ್ನದ ಹಬ್ಬ(ಬೇಂದ್ರೆ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪಡೆದು 50ನೇ ವರ್ಷದ ಸಂಭ್ರಮ) ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬೆಂದ್ರೆ ಅವರು ಸಾಕಷ್ಟು ಕೃತಿಗಳನ್ನು ರಚಿಸಿದ್ದಾರೆ. ಆ ಎಲ್ಲ ಕೃತಿಗಳು ನಮ್ಮ ಜೀವನಕ್ಕೆ ಹತ್ತಿರವಾಗಿವೆ. ಅಂತಹ ಒಂದು ಕೃತಿಯ ಅಂಶವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸಾಕ್ಷಾತ್ಕಾರವಾಗುತ್ತದೆ. ಮುಖ್ಯವಾಗಿ "ನಾಕುತಂತಿ' ಅರ್ಥಮಾಡಿಕೊಂಡರೆ ಬದುಕನ್ನು ಬದಲಾಯಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ ಮಾತನಾಡಿ, ಪ್ರತಿ ಕಾವ್ಯಗಳೂ ಜನ ಸಾಮಾನ್ಯರಿಗೂ ಅರ್ಥವಾಗುವಂತೆ ಬರೆಯುವ ಕಲೆ ಬೇಂದ್ರೆ ಅವರಲ್ಲಿತ್ತು. ಹಲವು ನಾಟಕಗಳಲ್ಲಿ ಅವರ ಗೀತೆಗಳನ್ನು ಹಾಡಿದ್ದೇವೆ. ಅವರ ಸಾಹಿತ್ಯ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಶಶಿಕಲಾ ಹುಡೇದ ಮಾತನಾಡಿದರು. ನಂತರ ನಡೆದ ಗೋಷ್ಠಿಗಳಲ್ಲಿ ಬೇಂದ್ರೆ ಅವರ ಜ್ಞಾನಪೀಠ ಭಾಷಣ ಕುರಿತು ಡಾ. ಪ್ರಕಾಶ ಗರುಡ, ನಾಕುತಂತಿ ವೈಶ್ವಿಕ ಆಶಯ ಕುರಿತು ಆನಂದ ಝುಂಜರವಾಡ, ನಾಕುತಂತಿ ಆರ್ಷೇಯ ದರ್ಶನಗಳು ಕುರಿತು ಡಾ. ಕೃಷ್ಣ ಕಟ್ಟಿ ಮತ್ತು ದ.ರಾ. ಬೇಂದ್ರೆ ಕವಿತೆಯಲ್ಲಿ ತತ್ವಜ್ಞಾನ ಕುರಿತು ಡಾ. ಶ್ರೀರಾಮ ಭಟ್ ಪ್ರಬಂಧ ಮಂಡಿಸಿದರು.
ರಮಾಕಾಂತ ಜೋಶಿ, ಹ.ವೆಂ. ಕಾಖಂಡಿಕಿ, ಸಮೀರ ಜೋಶಿ, ಇತರರು ಇದ್ದರು.