ಮೌಢ್ಯ ತೊರೆದರೆ ಎಸ್ಟಿ ಮೀಸಲು ಭಾಗ್ಯ

NYK KADUGOOLA 09
Published on

ನಾಯಕನಹಟ್ಟಿ: ಸಂಘಟಿತ ಹೋರಾಟದಿಂದ ಮಾತ್ರ ಕಾಡುಗೊಲ್ಲರಿಗೆ ಎಸ್‌ಟಿ ಮೀಸಲು ಸೌಲಭ್ಯ ದೊರೆಯಲು ಎಂದು ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ ಹೇಳಿದರು.

ಸಮೀಪದ ತಳಕು ಹೋಬಳಿಯ ಎತ್ತಪ್ಪ ಗುಡ್ಡದಲ್ಲಿ ಕಾಡುಗೊಲ್ಲ ಸಮುದಾಯ ಶನಿವಾರ ಆಯೋಜಿಸಿದ್ದ ಕಾಡುಗೊಲ್ಲರ ಚಿಂತನ ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾಡುಗೊಲ್ಲ ಸಮುದಾಯವು ಹಿಂದಿನ ಪದ್ಧತಿಗಳನ್ನು ಅನುಸರಿಸಿಕೊಂಡು ಬರುತ್ತಿರುವುದರಿಂದ ನಮಗೆ ಮೀಸಲಾತಿ ದೊರೆಯುತ್ತಿಲ್ಲ. ಮೌಢ್ಯಾಚರಣೆ ತೊರೆದು ಆಧುನಿಕತೆಯತ್ತ ಹೆಜ್ಜೆ ಹಾಕಿ, ಪ್ರಜ್ಞಾವಂತಿಕೆ ಅಳವಡಿಸಿಕೊಂಡು ಹೋರಾಟಕ್ಕೆ ಧುಮುಕಿದರೆ ಮೀಸಲು ಸೌಲಭ್ಯ ಸುಲಭವಾಗಿ ಧಕ್ಕಲಿದೆ ಎಂದರು.

ಶಿಕ್ಷಣ, ಒಗ್ಗಟ್ಟಿನ ಕೊರತೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಉದ್ದೇಶಗಳು ಈಡೇರಲು ಸಾಧ್ಯವಿಲ್ಲ. ಲೋಕಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವ ಮೂಲಕ ನಮ್ಮ ಹಕ್ಕು ಪಡೆಯಲು ಈಗಿನಿಂದಲೇ ಹೋರಾಟ ರೂಪಿಸಬೇಕು ಎಂದು ಹೇಳಿದರು.

ಸಂಘದ ಜಿಲ್ಲಾಧ್ಯಕ್ಷ ರಾಜ್‌ಕುಮಾರ್ ಮಾತನಾಡಿ, ರಾಜಕೀಯ ಪಕ್ಷಗಳು ಚುನಾವಣೆ ಬಳಿಕ ನಮ್ಮನ್ನು ಕಡೆಗಣಿಸುತ್ತೇವೆ. ಗೊಲ್ಲರಹಟ್ಟಿಗಳಲ್ಲಿ ಯುವಕರು ಸಂಘಗಳನ್ನು ರಚಿಸಿಕೊಂಡು ಧ್ವನಿಯೆತ್ತಿದಾಗ ಮಾತ್ರ ಸರ್ಕಾರದಿಂದ ಸ್ಪಂದನೆ ದೊರೆಯಲಿದೆ ಎಂದರು.

ತಾಲೂಕಾಧ್ಯಕ್ಷ ಎಸ್.ರವಿಕುಮಾರ್ ಮಾತನಾಡಿ, ಎತ್ತಪ್ಪ ಗುಡ್ಡವನ್ನು ಅಭಿವೃದ್ಧಿಪಡಿಸಲು ಈಗಾಗಲೇ 1.50 ಕೋಟಿ ರೂ. ಮಂಜೂರು ಆಗಿದ್ದು, 30 ಲಕ್ಷ ಬಿಡುಗಡೆಯಾಗಿ ಕೆಲಸ ಪ್ರಾರಂಭವಾಗಿದೆ. ಈ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ ಮಾಡಿ ಜಾತ್ರೆಯ ರೂಪದಲ್ಲಿ ಕಾಡುಗೊಲ್ಲರು ಸೇರುವ ವಾತಾವರಣ ನಿರ್ಮಿಸಬೇಕು ಎಂದರು.

ಕಾರ್ಯಕ್ರಮಕ್ಕೆ ಮುನ್ನ ಎತ್ತಪ್ಪ ಗುಡ್ಡದಲ್ಲಿನ ಎತ್ತಪ್ಪ ಸ್ವಾಮಿಯ ಸಮಾಧಿಗೆ ಪೂಜೆ ಸಲ್ಲಿಸಲಾಯಿತು. ಯಾದವ ಸಂಘದ ಜಿಲ್ಲಾಧ್ಯಕ್ಷ ಮೀಸೆ ಮಹಾಲಿಂಗಪ್ಪ, ಜಿಪಂ ಮಾಜಿ ಅಧ್ಯಕ್ಷ ಬಾಲರಾಜ್, ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್, ಮುಖಂಡರಾದ ದೊಡ್ಡನಾಗಯ್ಯ, ಬೂದಿಹಳ್ಳಿ ರಾಜಣ್ಣ, ದೇವರಾಜ್, ರಾಜಣ್ಣ, ಕರಿಯಪ್ಪ, ರಂಗಸ್ವಾಮಿ, ಗೋವಿಂದಪ್ಪ, ಸುಂಕಪ್ಪ, ಬಸವರಾಜ್, ಗಂಜಿಗಟ್ಟೆ ವಿ.ಮಧುಕುಮಾರ್, ಎ.ಚಿತ್ತಪ್ಪ ಇತರರಿದ್ದರು.

ಹೋರಾಟವೊಂದೇ ಮಾರ್ಗ: ಕಾಡುಗೊಲ್ಲ ಸಮುದಾಯ ಬುಡಕಟ್ಟು ಸಂಸ್ಕೃತಿ ಶ್ರೀಮಂತಿಕೆ ಹೊಂದಿದೆ. ಆದರೆ, ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಅತ್ಯಂತ ಹಿಂದುಳಿದಿದೆ. ಸಮುದಾಯದ ಸಮಗ್ರ ಅಭಿವೃದ್ಧಿಗೆ ಎಸ್‌ಟಿ ಮೀಸಲು ಸೌಲಭ್ಯವೊಂದೇ ಏಕೈಕ ಮಾರ್ಗ. ಆಳುವ ಸರ್ಕಾರಗಳು ನಮ್ಮ ಕೂಗನ್ನು ಕೇಳಿಸಿಕೊಂಡು ಬೇಡಿಕೆ ಈಡೇರಿಸಬೇಕು. ಈ ನಿಟ್ಟಿನಲ್ಲಿ ಸಂಘ ಕೈಗೊಳ್ಳುವ ಹೋರಾಟಕ್ಕೆ ನಾವೆಲ್ಲರೂ ಬೆಂಬಲವಾಗಿ ನಿಲ್ಲಬೇಕು.-ಇ.ದೊಡ್ಡನಾಗಯ್ಯ, ನಿವೃತ್ತ ಇಂಜಿನಿಯರ್

ಒತ್ತಡ ತಂತ್ರ ಅಗತ್ಯ: ಅತ್ಯಂತ ಸಂಕಷ್ಟದ ಜೀವನ ನಡೆಸುತ್ತಿರುವ ಕಾಡುಗೊಲ್ಲ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ನೀಡುವುದು ಸರ್ಕಾರದ ಆದ್ಯ ಕರ್ತವ್ಯ. ಈಗಾಗಲೇ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಶಿಫಾರಸ್ಸು ಆಗಿರುವುದಕ್ಕೆ ಕೇಂದ್ರ ಸರ್ಕಾರ ಸಮ್ಮತಿ ನೀಡಬೇಕು. ಈ ನಿಟ್ಟಿನಲ್ಲಿ ಒತ್ತಡ ತಂತ್ರ ಅಗತ್ಯ.-ಮೀಸೆ ಮಹಾಲಿಂಗಪ್ಪ, ಜಿಲ್ಲಾಧ್ಯಕ್ಷ, ಯಾದವ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net