ಮೋದಿಗೆ ಬೈಯದ್ದಿದ್ದರೆ ಸಿದ್ದುಗೆ ಊಟ ರುಚಿಸುವುದಿಲ್ಲ

h9-joshi 1
Published on

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೈಯದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಊಟ ರುಚಿಸುವುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಜರಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಸಿಸಿಸ್ ಉಗ್ರರ ನಂಟು ಹೊಂದಿರುವ ಮೌಲ್ವಿಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿದ್ದಾರೆಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸುವುದರ ಹೊರತಾಗಿ ಸಿದ್ದರಾಮಯ್ಯ ಬಾಲಿಷ ಹೇಳಿಕೆ ನೀಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ದೂರಿದರು.
ಮೌಲ್ವಿ ತನ್ವೀರ ಹಾಶ್ಮಿ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿರುವ ಭಾವಚಿತ್ರವನ್ನು ಸಿದ್ದರಾಮಯ್ಯ ಹಂಚಿಕೊಂಡಿದ್ದಾರೆ. ಆದರೆ ಈ ಭೇಟಿಯ ಸಂದರ್ಭದಲ್ಲಿ ಹಶ್ಮಿ ಅವರಿಗಿರುವ ನಂಟಿನ ಕುರಿತು ಗುಪ್ತ ಮಾಹಿತಿ ಇತ್ತೋ? ಇಲ್ಲವೋ? ಎಂಬುದು ತಿಳಿದಿಲ್ಲ. ಈ ಎಲ್ಲ ವಿಷಯ ಕುರಿತು ಸೂಕ್ತ ತನಿಖೆಯಾಗಿ ಮಾಹಿತಿ ಹೊರಬರಬೇಕಿದೆ ಎಂದರು.
ಬೆಳಗಾವಿ ಅಧಿವೇಶನದಲ್ಲಿ ವಿಪಕ್ಷ ನಾಯಕರ ನಡುವೆ ಹೊಂದಾಣಿಕೆ ಇಲ್ಲ ಎಂಬ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ವಿಪಕ್ಷ ನಾಯಕ ಆರ್. ಆಶೋಕ ಅವರು ಸ್ಪಷ್ಟೀಕರಣ ನೀಡಿದ್ದಾರೆ. ಮಾಹಿತಿ ಕೊರತೆಯಿಂದ ಗೊಂದಲವಾಗಿರುವುದು ನಿಜ. ಈ ಬಗ್ಗೆ ಸಂಬಂಧಿಸಿದ ನಾಯಕರೊಂದಿಗೆ ಸಭೆ ನಡೆಸಿ, ಗೊಂದಲ ನಿವಾರಿಸಲಾಗುವುದು ಎಂದರು.
ಅನುದಾನ ಹಂಚಿಕೆ: ಕರ್ನಾಟಕ ಸೇರಿ ವಿವಿಧ ರಾಜ್ಯಗಳಿಗೆ ಕೇಂದ್ರ ಸರ್ಕಾರ 10 ವರ್ಷಗಳಲ್ಲಿ ನೀಡಿದ ಅನುದಾನದ ಕುರಿತು ಸದ್ಯದಲ್ಲಿಯೇ ಮಾಹಿತಿ ಬಹಿರಂಗಪಡಿಸಲಾಗುವುದು. ರಾಜ್ಯ ಸರ್ಕಾರ ಬರ ಪರಿಹಾರ ಕಾಮಗಾರಿಗಳನ್ನು ಶೀಘ್ರವೇ ಆರಂಭಿಸಬೇಕು. ಎಸ್‌ಡಿಆರ್‌ಎಫ್ ಅನುದಾನ ಬಳಸಬೇಕು. ಎಸ್ಕಾಂ, ಕೆಎಸ್‌ಆರ್‌ಟಿಸಿಗೆ ಹಣ ನೀಡಲು ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರದ ಹಣ ಎಲ್ಲಿ ಹೋಯಿತು ? ಎಂದು ಪ್ರಶ್ನೆ ಮಾಡಿದರು.
ಜಾರ್ಖಂಡ್ ಕಾಂಗ್ರೆಸ್ ಸಂಸದ ಬುಲದೇವ ಸಾಹು ಅವರ ಮನೆಯಲ್ಲಿ 250 ಕೋಟಿ ರೂ.ಗೂ ಹೆಚ್ಚು ಹಣ ಸಿಕ್ಕಿದೆ. ಟಿಎಂಸಿ ನಾಯಕಿ ಮಹುವಾ 36ಕ್ಕೂ ಹೆಚ್ಚು ಬಾರಿ ವಿದೇಶ ಪ್ರಯಾಣ ಮಾಡಿದ್ದಾರೆ. ಜನರ ತೆರಿಗೆ ಪೋಲು ಮಾಡಲು ಬಿಡುವುದಿಲ್ಲ. ಒಂದೊಂದು ಪೈಸೆಯನ್ನು ವಾಪಸ್ ಪಡೆಯುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಇದಕ್ಕೆ ಪಕ್ಷ ಬದ್ಧವಾಗಿದೆ ಎಂದರು.
ರಾಹುಲ್ ಗಾಂಧಿ ಅವರು ಹೇಳುವ ‘ಮೋಹಬ್ಬತ್ ಕೀ ದುಖಾನ್’ದಲ್ಲಿ ಭ್ರಷ್ಟಾಚಾರದ ಅಂಗಡಿಯೇ ಮೊದಲು ಸಿಗಲಿದೆ ಎಂದು ಜೋಶಿ ಕುಟುಕಿದರು.
ಬೈಕ್ ರ‌್ಯಾಲಿ ಸ್ಥಗಿತ: ಖ್ಯಾತ ಚಿತ್ರನಟಿ ಲೀಲಾವತಿ ನಿಧನದ ಹಿನ್ನೆಲೆಯಲ್ಲಿ ಪ್ರಲ್ಹಾದ ಜೋಶಿ ಅವರನ್ನು ಸ್ವಾಗತಿಸಿಲು ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಬೈಕ್ ರ‌್ಯಾಲಿಯನ್ನು ಸ್ಥಗಿತಗೊಳಿಸಲಾಯಿತು. ಬಳಿಕ ಕನ್ನಡ ಚಿತ್ರರಂಗಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ ಲೀಲಾವತಿ ಅವರು ಚಿರಸ್ಮರಣೀಯರು, ಅವರ ನಿಧನದಿಂದಾಗಿ ಬೈಕ್ ರ‌್ಯಾಲಿ ಸ್ಥಗಿತಗೊಳಿಸಿದ್ದೇವೆ. ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸುತ್ತೇವೆ ಎಂದು ಜೋಶಿ ಹೇಳಿದರು. ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಮೇಯರ್ ವೀಣಾ ಬರದ್ವಾಡ, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ, ತಿಪ್ಪಣ್ಣ ಮಜ್ಜಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net