ಶ್ರೀಕೃಷ್ಣ ಜತೆಗಿದ್ದರೆ ಎಲ್ಲ ಕಷ್ಟ ಪರಿಹಾರ

SRS SRI
Published on

ಶಿರಸಿ: ಶ್ರೀಕೃಷ್ಣನನ್ನು ಜೀವನದಲ್ಲಿ ಜತೆಯಾಗಿಸಿಕೊಂಡರೆ ಕಷ್ಟಗಳು ತನ್ನಿಂದ ತಾನೇ ಪರಿಹಾರವಾಗುತ್ತವೆ. ಇದನ್ನು ಸ್ವತಃ ಶ್ರೀಕೃಷ್ಣನೇ ತನ್ನ ಜನ್ಮಕಾಲದಲ್ಲೇ ಜಗತ್ತಿಗೆ ತೋರಿಸಿಕೊಟ್ಟಿದ್ದಾನೆ ಎಂದು ಸಂಸ್ಥಾನ ಪರ್ತಗಾಳಿಮಠದ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.

ನಗರದ ರಾಯರಪೇಟೆ ಗೊಪಾಲಕೃಷ್ಣ ದೇವರ ಮರುಪ್ರತಿಷ್ಠಾ ಮಹೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶ್ರೀಕೃಷ್ಣನು ಮಥುರೆಯಲ್ಲಿ ಹುಟ್ಟಿದಾಗ ತಂದೆ ವಾಸುದೇವ ಕಂಸನಿಗೆ ಹೆದರಿ ಬುಟ್ಟಿಯಲ್ಲಿರಿಸಿಕೊಂಡು ರಾತ್ರಿವೇಳೆ ಮಥುರೆಯಿಂದ ಗೋಕುಲಕ್ಕೆ ತೆರಳುತ್ತಾನೆ. ಆಗ ಶ್ರಾವಣ ಮಾಸದ ಗಾಳಿ,ಮಳೆ, ಕತ್ತಲು, ತುಂಬಿ ಹರಿಯುವ ಯಮುನಾ ನದಿಯನ್ನೂ ಅಡೆತಡೆಗಳಿಲ್ಲದೆ ದಾಟಬೇಕಾಗುತ್ತದೆ. ಕೃಷ್ಣ ಜತೆಗಿರುವುದರಿಂದ ಸಮಸ್ಯೆಗಳು ಸುಲಭವಾಗಿ ಬಗೆಹರಿಯುತ್ತವೆ. ಮಳೆ ತಾಗಬಾರದೆಂದು ಆದಿಶೇಷನೇ ಆಸರೆಯಾಗುತ್ತಾನೆ. ಮಿಂಚು ದಾರಿ ತೋರಿಸುತ್ತವೆ. ಯಮುನಾ ನದಿ ತನ್ನ ಪ್ರವಾಹವನ್ನು ತಗ್ಗಿಸಿ ದಾಟಿ ಹೋಗಲು ದಾರಿ ಮಾಡಿಕೊಡುತ್ತದೆ. ಇದರ ತಾತ್ಪರ್ಯವೆಂದರೆ, ನಾವು ಕೂಡ ಜೀವನದಲ್ಲಿ ಕೃಷ್ಣನನ್ನು ಜತೆಯಲ್ಲಿರಿಸಿಕೊಂಡರೆ ಕಷ್ಟಗಳು ಸುಲಭವಾಗಿ ಪರಿಹಾರವಾಗಿ ಲಕ್ಷ್ಮೀದೇವಿಯ ಅನುಗ್ರಹಕ್ಕೆ ಪಾತ್ರರಾಗುತ್ತೇವೆ ಎಂಬುದಾಗಿದೆ ಎಂದರು.

ಜೀವನ ಶೈಲಿಯಲ್ಲಿ ತುಂಬ ಬದಲಾವಣೆಗಳಾಗಿವೆ. ಹಿಂದಿರುವ ಅನೇಕ ಪದ್ಧತಿಗಳು ಮಾಯವಾಗಿವೆ. ಆಧುನಿಕ ಸೌಕರ್ಯಗಳು ಮನೆ ತುಂಬಿವೆ. ಇದರಿಂದ ಶ್ರಮ ಸಂಸ್ಕೃತಿ ಮಾಯವಾಗಿ ಯಾಂತ್ರೀಕತೆ ಜೀವನವನ್ನಾಳುತ್ತಿದೆ. ಮಕ್ಕಳು ಶೇ. 98ಅಂಕ ಪಡೆಯಬೇಕು ಎಂದು ಪಾಲಕರು ಬಯಸುತ್ತಾರೆ. ಹಾಗೆ ಸಾಧನೆ ಮಾಡಿದ ಅನೇಕರು ವಿದೇಶಗಳ ಪಾಲಾಗುತ್ತಿದ್ದಾರೆ. ಕಡಿಮೆ ಸಾಧನೆ ಮಾಡಿದರೂ ತಂದೆ ತಾಯಿ ಜತೆಗಿದ್ದು ಅವರ ಸೇವೆ ಮಾಡುವ ಮಕ್ಕಳೇ ನಿಜವಾದ ಸೌಭಾಗ್ಯ ಎಂದರು.

ವೇ.ಮೂ. ಶ್ರವಣ ಆಚಾರ್ಯರ ವೇದಘೋಷ, ಶಾಂತಾ ನರಸಿಂಹ ಬಾರಕೂರ ಗುರುವಂದನ ಗೀತೆಯನ್ನು ಸಂಗಡಿಗರೊಂದಿಗೆ ಹಾಡಿದರು. ದೇವಸ್ಥಾನದ ಆಡಳಿತ ಸಮಿತಿ ಕಾರ್ಯದರ್ಶಿ ಹರೀಶ ಪಂಡಿತ ಸ್ವಾಗತಿಸಿದರು. ವರೀಂದ್ರ ಕಾಮತ ಪ್ರಾಸ್ತಾವಿಕವಾಗಿ ಮಾತನಾಡಿದರು. ದೆಹಲಿಯ ಸಂಸ್ಕೃತ ಭಾರತಿ ಅಧ್ಯಕ್ಷ ದಿನೇಶ ಕಾಮತ ದಿಕ್ಸೂಚಿ ಭಾಷಣಮಾಡಿದರು. ಡಾ. ವಿಠಲ ಭಟ್ಟ ನಿರೂಪಿಸಿದರು. ಕು. ಸೃಷ್ಟಿ ವಿವೇಕ ಪೈ ಪ್ರಾರ್ಥನಾ ನೃತ್ಯ ಹಾಗೂ ದೇವಳದ ಮರುನಿರ್ಮಾಣದ ಕುರಿತು ಸಾಕ್ಷೃಚಿತ್ರ ಪ್ರದರ್ಶಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net