ಸಾಹಿತ್ಯ ಅಳವಡಿಸಿಕೊಂಡರೆ ಶಿಕ್ಷಣದ ಘನತೆ ಹೆಚ್ಚಲಿದೆ

14
Published on

ಮೈಸೂರು: ವಚನಗಳು ವಿದ್ಯಾರ್ಥಿಗಳ ಉಸಿರಾದಾಗ ಮೌಲ್ಯಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಮರಿಮಲ್ಲಪ್ಪ ಪದವಿಪೂರ್ವ ಕಾಲೇಜಿನ ಶೈಕ್ಷಣಿಕ ಅಧಿಕಾರಿ ಮಂಗಳಾ ಮುದ್ದುಮಾದಪ್ಪ ಹೇಳಿದರು.

ಮೈಸೂರು ತಾಲೂಕಿನ ಕಿರಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಮುದ್ದುಮಾದಪ್ಪ ಅವರ ದತ್ತಿ ಅಂಗವಾಗಿ ಹಮ್ಮಿಕೊಂಡಿದ್ದ ಶಾಲೆಗಳೆಡೆಗೆ ವಚನಗಳ ನಡಿಗೆ ಮತ್ತು ಸರ್ಕಾರಿ ಶಾಲೆಗಳ ಬಲವರ್ಧನೆಗೆ ಬ್ಯಾಗ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಲ್ಲಕ್ಕಿಂತ ದೊಡ್ಡ ಆಸ್ತಿ ಎಂದರೆ ಶಿಕ್ಷಣ. ಅಂತಹ ಶಿಕ್ಷಣವನ್ನು ಪಡೆಯಲು ಇಂದಿನ ಪೀಳಿಗೆ ಹೆಚ್ಚು ಉತ್ಸುಕರಾಗಬೇಕು. ವಚನ ಸಾಹಿತ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಣದಲ್ಲಿ ಅಳವಡಿಸುವುದರಿಂದ ಘನತೆ ಹೆಚ್ಚಾಗುತ್ತದೆ. ವಚನಗಳಲ್ಲಿ ಸತ್ಯ ಇರುವುದರಿಂದ ನೂರಾರು ವರ್ಷಗಳು ಕಳೆದರೂ ಅನೇಕರ ಉಸಿರಾಗಿದೆ. ಅಂತಹ ವಚನ ಸಾಹಿತ್ಯವು ನಮ್ಮ ಜೀವನವನ್ನು ಉತ್ತಮವಾಗಿ ಕಟ್ಟಿಕೊಳ್ಳಲು ಸಹಾಯಕವಾಗುತ್ತದೆ ಎಂದರು.

ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಮಾತನಾಡಿ, ಜೀವನದಲ್ಲಿ ಗುರಿ ಸ್ಪಷ್ಟವಾಗಿದ್ದು, ಏಕಾಗ್ರತೆ ಮತ್ತು ಪರಿಶ್ರಮದಿಂದ ಸಾಧನೆಯತ್ತ ಹೆಜ್ಜೆ ಹಾಕಿದರೆ ಯಶಸ್ಸು ನಮ್ಮದಾಗುತ್ತದೆ. ಅಡ್ಡದಾರಿ ಹಿಡಿದು ಪಡೆಯುವ ಗೆಲುವಿಗಿಂತ ಸರಿದಾರಿಯಲ್ಲಿ ನಡೆದು ಪ್ರಯತ್ನಪಟ್ಟ ನಂತರವೂ ಬರಬಹುದಾದ ಸೋಲು ಗೌರವಯುತವಾದುದು. ರಾಜಕಾರಣಿ, ವೈದ್ಯ, ಶಿಕ್ಷಕ, ನ್ಯಾಯಾಧೀಶ ಏನೇ ಆಗು, ಆದರೆ ಮೊದಲು ಮಾನವನಾಗು ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಲಾಯಿತು. ವಚನ ವಾಚನ ಮಾಡಿದ ವಿದ್ಯಾರ್ಥಿಗಳಿಗೆ ವಚನ ಪುಸ್ತಕ ಮತ್ತು ವಚನದೀವಿಗೆ ಪ್ರಮಾಣಪತ್ರ ನೀಡಲಾಯಿತು. ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ರೂಪಾ ಕುಮಾರಸ್ವಾಮಿ, ವಕೀಲ ರವಿಕುಮಾರ್, ಮುಖ್ಯಶಿಕ್ಷಕಿ ಪುಟ್ಟಮಹದೇವಮ್ಮ, ಶಿಕ್ಷಕರಾದ ಎಂ. ಮಹದೇವಸ್ವಾಮಿ, ಎನ್.ಎಲ್.ಆಶಾ, ಎನ್. ಸರಸ್ವತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net