

ಮಹಾಲಿಂಗಪುರ: ಪುರಸಭೆ ವ್ಯಾಪ್ತಿಯ ಸಾರ್ವಜನಿಕ ಜಾಗ ಅತಿಕ್ರಮಿಸಿ ನಿವೇಶನ ನಿರ್ಮಿಸುವುದಾಗಲಿ, ಹಂಚಿಕೆ ಮಾಡುವಂತಹ ಅಕ್ರಮ ಚಟುವಟಿಕೆ ನಡೆದಿಲ್ಲ ಎಂದು ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ತಿಳಿಸಿದ್ದಾರೆ.
ಕೆಂಗೇರಿಮಡ್ಡಿ ಬಡಾವಣೆಯ ಸರ್ವೇ ನಂಬರ್ 29/1 ರಲ್ಲಿನ 3 ಎಕರೆ 6 ಗುಂಟೆ ಜಾದಲ್ಲಿ ಕೆಲವರು ನಿವೇಶನ ಮಾಡಿ ಹಂಚುತ್ತಿದ್ದಾರೆ ಎಂದು ಪುರಸಭೆ ಕೆಲ ಸದಸ್ಯರು ಜಿಲ್ಲಾಧಿಕಾರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ಪುರಸಭೆ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡು ಮೂರು ತಿಂಗಳು ಗತಿಸಿದೆ. ಈ ಅಕ್ರಮ ಹಿಂದಿನ ಅಧಿಕಾರಾವಧಿಯಲ್ಲಿ ನಡೆದಿರಬಹುದು. ಅಕ್ರಮ ಕಂಡು ಬಂದಲ್ಲಿ ಅನಧಿಕೃತ ಮನೆಗಳನ್ನು ತೆರವುಗೊಳಿಸಿ ವಶಪಡಿಸಿಕೊಳ್ಳುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.
ಪುರಸಭೆ ಸದಸ್ಯ ಮುಸ್ತಾಕ್ ಚಿಕ್ಕೋಡಿ, ಸುನೀಲಗೌಡ ಪಾಟೀಲ, ಅರ್ಜುನ ದೊಡಮನಿ,ಲಕ್ಷ್ಮಣ ಮಾಂಗ,ಆನಂದ ಬಂಡಿ ಇದ್ದರು.