

ಮೈಸೂರು: ಕುವೆಂಪು ಅವರ ಕೃತಿಗಳು ಇಂಗ್ಲಿಷ್ ಭಾಷೆಗೆ ತರ್ಜುಮೆಯಾಗಿದ್ದರೆ ಅವರಿಗೂ ನೊಬೆಲ್ ಪ್ರಶಸ್ತಿ ಲಭಿಸುತ್ತಿತ್ತು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಭಿಪ್ರಾಯಪಟ್ಟರು.
ಕನ್ನಡ ನುಡಿ ಮುತ್ತು ಸಾಹಿತ್ಯ ವೇದಿಕೆ, ನಿಸರ್ಗ ಸಂಗೀತ ವಿದ್ಯಾಲಯ ಸಂಘ, ಲಯನ್ಸ್ ಕ್ಲಬ್ ಆಫ್ ಮೈಸೂರು ಮಿಲೇನಿಯಂ ಹಾಗೂ ಸಂಜನಾ ಬಳಗ ಪ್ರತಿಷ್ಠಾನದಿಂದ ನಗರದ ಶ್ರೀನಟರಾಜ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ಮುತ್ತು ಯ ವಡ್ಡರ ಅವರ ಸಂಪಾದಕೀಯದ ‘ಎಲೆಮರೆ ಕಾಯಿಗಳು’ ಮತ್ತು ಲಯನ್ ಡಾ.ನ.ಗಂಗಾಧರಪ್ಪ ನಾರಣಾಪುರ ಅವರ ’ಎರೆನಾಡ ಅಂಕುರ’ ಕೃತಿ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಸಾಹಿತ್ಯದಿಂದ ಹಿಡಿದು ಕತೆ, ಕಾದಂಬರಿ, ಕವನ ಸಂಕಲ, ಪ್ರಕೃತಿ ಸೇರಿದಂತೆ ಎಲ್ಲ ಪ್ರಕಾರದಲ್ಲಿಯೂ ಕುವೆಂಪು ಅವರು ಬರೆದಿದ್ದಾರೆ. ಅವರ ಕೃತಿಗಳು ಯಾವ ಸಾಹಿತ್ಯಕ್ಕೂ ಕಡಿಮೆ ಇಲ್ಲದಂತೆ ಅತ್ಯುತ್ತಮವಾಗಿವೆ. ಅವರ ಕೃತಿಗಳು ಇಂಗ್ಲಿಷ್‌ಗೆ ಅನುವಾದವಾಗಿದ್ದರೆ, ಡಾ.ರವೀಂದ್ರ ಟಾಗೋರ್‌ರಂತೆ ಕುವೆಂಪು ಅವರಿಗೂ ನೋಬೆಲ್ ಪ್ರಶಸ್ತಿ ಲಭಿಸುತ್ತಿದ್ದವು ಎಂದು ಹೇಳಿದರು.
ಕಾಲೇಜು ದಿನಗಳಲ್ಲಿ ಕುವೆಂಪು ಅವರು ಇಂಗ್ಲಿಷ್‌ನಲ್ಲಿ ಕವಿತೆ ಬರೆಯುತ್ತಿದ್ದರು. ಅದನ್ನು ಅವರ ಶಿಕ್ಷಕರು ನೋಡಿ ನಿಮ್ಮ ಮಾತೃಭಾಷೆಯಲ್ಲಿ ಬರೆದರೆ ಭಾವನೆಗಳು ಇನ್ನಷ್ಟು ಆಳವಾಗಿ ಮೂಡುತ್ತವೆ. ಹಾಗಾಗಿ ಕನ್ನಡದಲ್ಲಿ ಬರೆಯುವಂತೆ ಪ್ರೇರೇಪಿಸಿದರು. ಹೀಗಾಗಿ ಅವರು ಕನ್ನಡದಲ್ಲಿ ಸಾಹಿತ್ಯ ರಚಿಸಿ ವಿಶ್ವ ಮಾನವರಾಗಿದ್ದಾರೆ ಎಂದು ಬಣ್ಣಿಸಿದರು.
ಎಲೆಮರೆ ಕಾಯಿಗಳ ಕೃತಿಯಲ್ಲಿ ಎಲ್ಲಿಯೂ ಪರಿಚಯವಾಗದ 46 ಮಂದಿ ಸಾಧಕರನ್ನು ಇಲ್ಲಿ ಪರಿಚಯಿಸಿದ್ದಾರೆ. ಈ ರೀತಿ ಕೆಲಸ ಹೆಚ್ಚಾಗಬೇಕು. ಎರೆನಾಡ ಅಂಕುರ’ ಕೃತಿ ಉತ್ತಮವಾಗಿ ಮೂಡಿ ಬಂದಿದೆ ಎಂದರು.
ಲೇಖಕ ಹನುಮಸಾಗರದ ಮಲ್ಲಯ್ಯ ಕೋಮಾರಿ ಅವರು ‘ಎಲೆಮರೆ ಕಾಯಿಗಳು’ ಕೃತಿ ಬಿಡುಗಡೆಗೊಳಿಸಿದರೆ, ಯುವ ಸಾಹಿತಿ ಜ್ಯೋತಿ ಆನಂದ್ ಚಂದುಕರ ಕೃತಿ ಪರಿಚಯ ಮಾಡಿಕೊಟ್ಟರು. ಎರೆನಾಡ ಅಂಕುರ ಕೃತಿಯನ್ನು ಲಯನ್ಸ್ ಸಂಸ್ಥೆಯ ಡಾ.ನಾಗರಾಜ ವಿ.ಭೈರಿ ಬಿಡುಗಡೆಗೊಳಿಸಿ, ಕನ್ನಡ ಸಾಹಿತ್ಯ ಕಲಾ ಕೂಟದ ಎಂ.ಚಂದ್ರಶೇಖರ್ ಕೃತಿ ಪರಿಚಯಿಸಿದರು.
ಹೊಸಮಠದ ಶ್ರೀಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದರು. ಲಯನ್ಸ್ ಕ್ಲಬ್ ಮಿಲೇನಿಯಂನ ಅಧ್ಯಕ್ಷ ಎ.ಸಿ.ರವಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂನ ಆರಕ್ಷಕ ನಿರೀಕ್ಷಕಿ ಎಂ.ಗೀತಾ, ಬರಹಗಾರ್ತಿ ಈರಮಂಡ ಹರಿಣಿ ವಿಜಯ್, ಮಡಿಕೇರಿ ಓಂ ಬಳಗದ ಸಂಸ್ಥಾಪಕ ಎಂ.ಕೆ.ಜಯಕುಮಾರ್, ಕನ್ನಡ ನುಡಿಮುತ್ತು ಸಾಹಿತ್ಯ ವೇದಿಕೆಯ ಜಗದೀಶ್ ಎಸ್.ಕಾಬನೆ, ಲೇಖಕ ಮುತ್ತು ಯ ವಡ್ಡರ, ಲಯನ್ಸ್ ಸಂಸ್ಥೆ ಕಾರ್ಯದರ್ಶಿ ಎನ್.ಸುನೀಲ್‌ಕುಮಾರ್, ಖಜಾಂಚಿ ಎಂ.ಜೆ.ರಮೇಶ್, ವೇದಿಕೆ ಕಾರ್ಯದರ್ಶಿ ಸಾಗರ್‌ಪಿ.ನಿಂಬಾಳ,ಕಾರ್ಯಕಾರಿ ಸಮಿತಿ ಸದಸ್ಯ ವಿನೋದ್‌ಕುಮಾರ್ ಪಾಟೀಲ್ ಇತರರು ಇದ್ದರು.