

ಯಲ್ಲಾಪುರ: ತಾಲೂಕಿನ ಮಾಗೋಡ ರಸ್ತೆಯ ಕಾಳಿಮನೆ ಕ್ರಾಸ್ ಬಳಿ ಮಳೆಯ ನೀರು ತುಂಬಿ ನಿಂತು, ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗುವ ಸಮಸ್ಯೆ ಈ ಮಳೆಗಾಲದಲ್ಲೂ ಮುಂದುವರಿದಿದೆ.
ಯಲ್ಲಾಪುರದಿಂದ ಮಾಗೋಡಿಗೆ ಹೋಗುವ ಮುಖ್ಯರಸ್ತೆಯ ಕಾಳಿಮನೆ ಕ್ರಾಸ್ ಬಳಿ ಒಂದು ತಾಸು ಮಳೆ ಸುರಿದರೆ ನೀರು ನಿಂತು ದೊಡ್ಡ ಹಳ್ಳದಂತಾಗುತ್ತದೆ. ಇದರಿಂದ ವಾಹನಗಳು ಓಡಾಡಲು ಕಷ್ಟಪಡಬೇಕು. ಐದಾರು ವರ್ಷಗಳಿಂದ ಪ್ರತಿ ಮಳೆಗಾಲದಲ್ಲಿ ವಾಹನ ಸವಾರರು ಇದೇ ಬವಣೆ ಅನುಭವಿಸುತ್ತಿದ್ದಾರೆ.
ನಿತ್ಯ ನೂರಾರು ಪ್ರವಾಸಿಗರು ಮಾಗೋಡ ಜಲಪಾತಕ್ಕೆ, ಜೇನುಕಲ್ಲುಗುಡ್ಡ, ಚಂದಗುಳಿ ಘಂಟೆ ಗಣಪತಿ ದೇವಸ್ಥಾನಕ್ಕೆ ಇದೇ ರಸ್ತೆಯಲ್ಲಿ ಹೋಗುತ್ತಾರೆ. ನಂದೊಳ್ಳಿ, ಮಾಗೋಡ ಭಾಗದ ಜನ, ವಿದ್ಯಾರ್ಥಿಗಳಿಗೆ ನಿತ್ಯದ ಓಡಾಟದ ರಸ್ತೆ ಇದಾಗಿದೆ.
ಲೋಕೋಪಯೋಗಿ ಇಲಾಖೆಯ ಈ ರಸ್ತೆಗೆ ಸರಿಯಾದ ಗಟಾರ ವ್ಯವಸ್ಥೆ ಇಲ್ಲ. ಮಳೆಯ ನೀರು ಹರಿದು ಹೋಗಲು ಸ್ಥಳವೇ ಇಲ್ಲ. ಇತ್ತೀಚೆಗೆ ಪಕ್ಕದ ಜಮೀನಿನ ಮಾಲೀಕರು ರಸ್ತೆಗೆ ತಾಗಿ ಕಾಂಪೌಂಡ್ ನಿರ್ಮಿಸಿದ್ದಾರೆ. ಎಲ್ಲ ಸೇರಿ ಮಳೆ ನೀರು ರಸ್ತೆಯಲ್ಲಿ ನಿಲ್ಲುತ್ತದೆ.
ಕಳೆದ ತಿಂಗಳು ನಂದೊಳ್ಳಿ ಗ್ರಾ.ಪಂ. ಸದಸ್ಯ ನರಸಿಂಹ ಕೋಣೆಮನೆ ಅವರು ರಸ್ತೆ ಪಕ್ಕ ಗಟಾರ ನಿರ್ಮಿಸಿ ನೀರು ಹರಿದು ಹೋಗಲು ವ್ಯವಸ್ಥೆ ಕಲ್ಪಿಸಿದ್ದರು. ಜೋರಾದ ಮಳೆಯಿಂದಾಗಿ ಅದೂ ವ್ಯರ್ಥವಾಗಿದೆ.
ಗಟಾರ ವ್ಯವಸ್ಥೆ ಮಾಡಿದರೂ ಗಟಾರದ ನೀರು ರಸ್ತೆ ಪಕ್ಕದ ಜಮೀನಿನ ಮೂಲಕ ಸಮೀಪದ ಕೆರೆಗೆ ಹೋಗಬೇಕು. ರಸ್ತೆಗೆ ಸಂಬಂಧಿಸಿದ್ದಾದಲ್ಲಿ ನಾವು ಕೆಲಸ ಮಾಡಬಹುದು, ಖಾಸಗಿಯವರ ಜಮೀನಿನಲ್ಲಿ ನೀರು ಹೋಗಲು ಅನುವು ಮಾಡಿಕೊಡಲು ಇಲಾಖೆಗೆ ಅವಕಾಶವಿಲ್ಲ ಎಂಬುದು ಅಧಿಕಾರಿಗಳ ಮಾತು. ಒಟ್ಟಾರೆ ಸಮಸ್ಯೆ ಮಾತ್ರ ಶಾಶ್ವತವಾಗಿದ್ದು, ಇದಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಯಾರೂ ಇಚ್ಛಾಶಕ್ತಿ ತೋರದಿರುವುದು ವಿಪರ್ಯಾಸವೇ ಸರಿ.
ಮುಂದಿನ ಬಾರಿ ರಸ್ತೆಗೆ ಅನುದಾನ ಮಂಜೂರಾದಾಗ ನೀರು ನಿಲ್ಲುವ ಪ್ರದೇಶದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಿ, ರಸ್ತೆಯನ್ನು ಎತ್ತರಿಸಿ, ಸಿಡಿ ವ್ಯವಸ್ಥೆ ಮಾಡಲಾಗುವುದು. ಇದರಿಂದ ಸಮಸ್ಯೆ ಪರಿಹಾರವಾಗಲಿದೆ.I ವಿಶಾಲ ಕಟಾವಕರ, ಲೋಕೋಪಯೋಗಿ ಇಲಾಖೆಯ ಇಂಜನಿಯರ್