

ನಾಪೋಕ್ಲು:
ಬ್ರಹ್ಮಗಿರಿ ಬೆಟ್ಟಶ್ರೇಣಿ ಸೇರಿದಂತೆ ಕಾವೇರಿ ಉಗಮಸ್ಥಾನದಲ್ಲಿ ಮಳೆ ಜೋರಾಗುತ್ತಿದ್ದಂತೆಯೇ ನಾಪೋಕ್ಲು ಸುತ್ತಮುತ್ತಲಿನ ನಿವಾಸಿಗಳ ಎದೆ ಜೋರಾಗಿ ಬಡಿದುಕೊಳ್ಳಲು ಶುರುವಾಗುತ್ತದೆ. ಮಡಿಕೇರಿ ತಾಲೂಕಿನ ದೊಡ್ಡ ಪಟ್ಟಣಗಳಲ್ಲಿ ಒಂದಾಗಿರುವ ನಾಪೋಕ್ಲು ಮಳೆಗಾಲದಲ್ಲಿ ಅಕ್ಷರಶಃ ದ್ವೀಪವಾಗುತ್ತದೆ. ಹಾಲು, ಪತ್ರಿಕೆ ಸೇರಿದಂತೆ ಕನಿಷ್ಠ ಮೂಲಭೂತ ಸೌಲಭ್ಯಗಳೂ ಸಿಗದ ಸ್ಥಿತಿ ನಿರ್ಮಾಣ ಆಗುತ್ತದೆ. ಈ ಮಳೆಗಾಲವೂ ಇಂಥ ಸ್ಥಿತಿಯಿಂದ ನಾಪೋಕ್ಲು ಹೊರತಾಗಿಯೇನೂ ಇಲ್ಲ.
ಸದ್ಯಕ್ಕೆ ಮಳೆಯ ಪ್ರಮಾಣ ಸ್ವಲ್ಪ ಕಡಿಮೆ ಆಗುತ್ತಿರುವುದರಿಂದ ನಾಪೋಕ್ಲು ನಿವಾಸಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕಾವೇರಿ ನದಿಯಲ್ಲಿ ನೀರಿನ ಮಟ್ಟ ಇಳಿಯುತ್ತಿದ್ದು ಪ್ರವಾಹದ ಪರಿಸ್ಥಿತಿಯೂ ಸ್ವಲ್ಪ ಮಟ್ಟಿಗೆ ದೂರ ಆದಂತಿದೆ. ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆರಿಯಪರಂಬು ನಿವಾಸಿಗಳಿಗೂ ಸದ್ಯಕ್ಕೆ ಹೋದ ಜೀವ ಬಂದAತಾಗಿದೆ. ನಾಪೋಕ್ಲು-ಮಡಿಕೇರಿ, ನಾಪೋಕ್ಲು - ಮೂರ್ನಾಡು ರಸ್ತೆಗಳೂ ವಾಹನ ಸಂಚಾರಕ್ಕೆ ಮುಕ್ತವಾಗಿರುವುದರಿಂದ ದ್ವಿಪದಂತಾಗಿದ್ದ ಪಟ್ಟಣ ಈಗ ಚೇತರಿಸಿಕೊಳ್ಳುತ್ತಿದೆ.
ಜಿಲ್ಲೆಯಲ್ಲಿ ಹೆಚ್ಚಿನ ಮಳೆ ಆಗುವ ಪ್ರದೇಶಗಳ ಪೈಕಿ ನಾಪೋಕ್ಲು ಕೂಡ ಒಂದು. ಮಳೆ ದೇವರು ಎಂದು ಆರಾಧಿಸುವ ಶ್ರೀ ಪಾಡಿ ಇಗ್ಗುತ್ತಪ್ಪನ ನೆಲೆ ಇದೇ ವ್ಯಾಪ್ತಿಯಲ್ಲಿ ಇರುವುದಕ್ಕೆ ಪೂರಕಾವಾಗಿ ಎನ್ನುವಂತೆ ಸಾಮಾನ್ಯವಾಗಿ ವರ್ಷದ ಪ್ರಥಮ ಮಳೆ ಈ ಭಾಗದಲ್ಲೇ ಸುರಿಯುತ್ತದೆ. ಎಲ್ಲಾ ಕಡೆಯಲ್ಲಿ ಮಳೆಗಾಲ ಶುರುವಾಗುವ ಸಮಯಕ್ಕೆ ಇಲ್ಲಿ ವಾಡಿಕೆಯ ಮಳೆ ಬಂದುಬಿಟ್ಟಿರುತ್ತದೆ. ಇದು ಒಮ್ಮೊಮ್ಮೆ ಕಾಫಿ ಬೆಳೆಗಾರರಿಗೆ ಖುಷಿ ಕೊಟ್ಟರೆ, ಮಳೆ ಹೆಚ್ಚಾದಾಗ ಉಂಟಾಗುವ ನಷ್ಟ ಮಳೆರಾಯನಿಗೆ ಶಪಿಸುವಂತೆ ಮಾಡುತ್ತದೆ.
ಈ ವರ್ಷ ಅಧಿಕ ಮಳೆಯಿಂದಾಗಿ ಈ ಭಾಗದ ಕಾಫಿ ತೋಟಗಳಲ್ಲೂ ಕಾಫಿ ಮಿಡಿ ಉದುರುವಿಕೆಯ ಪ್ರಮಾಣ ಹೆಚ್ಚಾಗಿ ಕಂಡುಬAದಿದ್ದು ಬೆಳೆಗಾರರು ಚಿಂತಿತರಾಗಿದ್ದಾರೆ. ಕೆಲವು ಗಿಡಗಳಲ್ಲಿ ಕಾಫಿಯ ಫಸಲು ಬಹುತೇಕ ನೆಲಕಚ್ಚಿದೆ. ಕೊಳೆರೋಗದಿಂದ ಕಾಫಿ ಗಿಡಗಳ ರೆಂಬೆಗಳಲ್ಲಿನ ಫಸಲು ಕಪ್ಪಾಗಿ ಕಾಫಿ ಮಿಡಿಗಳು ಇನ್ನಷ್ಟು ಉದುರಿ ಇತರ ಗಿಡಗಳಿಗೂ ಹರಡುವ ಆತಂಕ ರೈತರಲ್ಲಿ ಮನೆಮಾಡಿದೆ. ಮತ್ತಷ್ಟು ಮಳೆ ಸುರಿದರೆ ಬಹುತೇಕ ಫಸಲು ಉದುರಿ ಹೋಗುವ ಸಾಧ್ಯತೆ ಇದ್ದು ವರ್ಷದ ಫಸಲು ಕೈ ಸೇರದಂತಾಗುವ ಸಾಧ್ಯತೆಗಳು ಕಂಡು ಬರುತ್ತಿದೆ.
ನಾಪೋಕ್ಲು ವ್ಯಾಪ್ತಿಯಲ್ಲಿ ಬಹುತೇಕ ಕಡೆಗಳಲ್ಲಿ ಈ ವರ್ಷ ಕಳೆದ ವರ್ಷಕ್ಕೆ ಹೋಲಿಸಿದರೆ 2 ಪಟ್ಟು ಹೆಚ್ಚು ಮಳೆಯಾಗಿದೆ. ಮಳೆ ಮತ್ತು ಕಾರ್ಮಿಕರ ಕೊರತೆಯಿಂದಾಗಿ ಕಾಫಿ ಉದುರುವುದನ್ನು ತಡೆಗಟ್ಟಲು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಬೆಳೆಗಾರರಿಗೆ ಸಾಧ್ಯವಾಗಿಲ್ಲ. ಮುಂದೆ ಮತ್ತೆ ಬಿರುಸಿನ ಮಳೆಯಾಗುವ ಸಾಧ್ಯತೆಗಳಿದ್ದು ಕಾಫಿ ಫಸಲು ಉದುರಿ ಬೆಳೆಗಾರರಿಗೆ ಹೆಚ್ಚಿನ ನಷ್ಟ ಸಂಭವಿಸಲಿದೆ ಎನ್ನಲಾಗುತ್ತಿದೆ.
ಈ ಬಾರಿ ಹೂಮಳೆಗೆ ಬೇಕಾದ ಮಳೆ ಪ್ರಾರಂಭದಲ್ಲಿ ಸಿಕ್ಕಿಲ್ಲ ಮತ್ತು ಅಧಿಕ ಉಷ್ಣಾಂಶದಿAದಾಗಿ ಕಾಫಿಯ ಉದುರುವಿಕೆ ಸಂಭವಿಸಿರಬಹುದು ಎನ್ನುತ್ತಾರೆ ಬೆಳೆಗಾರರು. ನಾಪೋಕ್ಲು, ನೆಲಜಿ, ಬಲ್ಲಮಾವಟ್ಟಿ ಕಕ್ಕಬೆ, ನಾಲಡಿ, ಯವಕಪಾಡಿ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಹೆಚ್ಚಿನ ಮಳೆಯಾಗಿದ್ದು ಕಾಫಿ ತೋಟಗಳಲ್ಲಿ ಗಿಡಗಳಲ್ಲಿನ ಫಸಲು ಉದುರುತ್ತಿದೆ. ಜೊತೆಗೆ ಇದೀಗ ಕಾಫಿ ಗಿಡಗಳಿಗೆ ಕೊಳೆರೋಗ ತಗುÀಲಿದ್ದು ಅಪಾರ ಪ್ರಮಾಣದಲ್ಲಿ ಫಸಲು ಹಾನಿಯಾಗಿದೆ.
ಮತ್ತೊಂದು ಕಡೆ ಚೆರಿಯಪರಂಬು ನಿವಾಸಿಗಳ ಗೋಳು ಈ ವರ್ಷವೂ ಮುಂದುವರಿದಿದೆ. ಸುಮಾರು 200 ಕುಟುಂಬಗಳು ಇಲ್ಲಿಯ ಕಾವೇರಿ ನದಿಪಾತ್ರದಲ್ಲಿ ವಾಸ ಮಾಡುತ್ತಿದ್ದು, ಬಹುತೇಕರು ಇನ್ನೂ ಕಚ್ಛಾ ಮನೆಗಳಲ್ಲೇ ದಿನದೂಡುತ್ತಿದ್ದಾರೆ. ಸ್ವಲ್ಪ ಹಣ ಉಳ್ಳವರು ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಇಲ್ಲಿಯ ಮನೆಗಳು ಅನಧಿಕೃತ ಎಂದು ಸರ್ಕಾರಿ ದಾಖಲೆಗಳು ಹೇಳುತ್ತಿದ್ದು, ವಿದ್ಯುತ್ ಸಂಪರ್ಕ ಕಲ್ಪಿಸಲಿಲ್ಲ. ಆದರೆ ಪಂಚಾಯಿತಿ ವತಿಯಿಂದ ನೀರಿನ ಸಂಪರ್ಕ ಕೊಡಲಾಗಿದೆ. ಇಲ್ಲಿಯ ಮನೆಗಳು ಅನಧಿಕೃತ ಎನ್ನುವ ಕಾರಣಕ್ಕೆ ಪ್ರತಿವರ್ಷ ಮಳೆಗಾಲ ಸಂದರ್ಭದಲ್ಲಿ ಕಂದಯ ಇಲಾಖೆ ಎಚ್ಚರಿಕೆಯ ನೊಟೀಸ್ ಕೊಡುತ್ತಿದೆಯೇ ವಿನಃ ಇಲ್ಲಿನ ನಿವಾಸಿಗಳಿಗೆ ಕಾಳಜಿ ಕೇಂದ್ರ ತೆರೆಯುವ ಕೆಲಸ ಆಗಿಲ್ಲ.
ಮಳೆ ಬಂದು ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚದಾಗ ನಾಪೋಕ್ಲು-ಕಲ್ಲುಮೊಟ್ಟೆ, ನಾಪೋಕ್ಲು-ಮಡಿಕೇರಿ, ನಾಪೋಕ್ಲು-ಮೂರ್ನಾಡು ರಸ್ತೆ ಸಂಪರ್ಕ ಕಡಿತ ಆಗುವುದು ಸಾಮಾನ್ಯ. ಈ ರಸ್ತೆಗಳನ್ನು ಎತ್ತರ ಮಾಡುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಆದರೆ ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ ಎನ್ನುವುದು ಸ್ಥಳೀಯರ ಆರೋಪ. ಪ್ರವಾಹ ಸಂದರ್ಭದಲ್ಲಿ ಇಲ್ಲಿನವರು ಕನಿಷ್ಠ ಮೂಲಭೂತ ಸೌಕರ್ಯಗಳಿಂದ ಮಾತ್ರ ವಂಚಿತರಾಗುವುದಿಲ್ಲ. ಅನಾರೋಗ್ಯ ಸಮಸ್ಯೆ ಉಂಟಾದರೆ ದೇವರೇ ಕಾಪಾಡಬೇಕು ಎನ್ನುತ್ತಾರೆ ಸ್ಥಳೀಯರು.
ಮೂರ್ನಾಡು-ನಾಪೋಕ್ಲು ರಸ್ತೆ ಬೋಳಿಬಾಣೆ ಬಳಿ ಒಂದು ವಾರದಿಂದ ಬಂದ್ ಆಗಿತ್ತು. ಇದರಿಂದಾಗಿ ನಾಪೋಕ್ಲು ಒಂದು ರೀತಿಯಲ್ಲಿ ಅಂಡಮಾನ್ ರೀತಿ ಆಗಿಬಿಟ್ಟಿತ್ತು. ಎಲ್ಲಾ ರಸ್ತೆಗಳು ಬಂದ್ ಆಗಿದ್ದರಿಂದ ನಮಗೆ ಪೇಪರ್, ಹಾಲು ಸಿಗಲಿಲ್ಲ. ನಾಪೋಕ್ಲು ಸೇತುವೆ - ಕೊಟ್ಟಮುಡಿ ಮತ್ತು ಮೂರ್ನಾಡು ರಸ್ತೆಯ ಬೊಳಿಬಾಣೆ ರಸ್ತೆಗಳ ಎತ್ತರವನ್ನು ಹೆಚ್ಚಿಸುವುದೊಂದೇ ಶಾಶ್ವತ ಪರಿಹಾರವಾಗಿದೆ. ನಾವು ದಶಕಗಳಿಂದ ಈ ಕಾಮಗಾರಿಗೆ ಮನವಿ ಮಾಡಿದ್ದರೂ ಯಾವುದೇ ಫಲಿತಾಂಶ ಸಿಕ್ಕಿಲ್ಲ.
ಡಾ. ಸಣ್ಣುವಂಡ ಕಾವೇರಪ್ಪ, ಮಾಜಿ ಉಪಾಧ್ಯಕ್ಷ, ಕಾಫಿ ಮಂಡಳಿ
ನಾಪೋಕ್ಲುವಿನಲ್ಲಿ ಮಳೆಗಾಲದ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ನಮ್ಮ ಗಮನಕ್ಕೆ ತಂದಿದ್ದಾರೆ. ಅಗತ್ಯವಿರುವ ಕಡೆ ರಸ್ತೆ ಹೆಚ್ಚಳ ಮಾಡಿ ಮಳೆಗಾಲದಲ್ಲಿನ ತೊಂದರೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಸಂಬAಧ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ. ಚೆರಿಯಪರಂಬು ನಿವಾಸಿಗಳ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ಕಲ್ಪಿಸುವ ಸಂಬAಧ ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದೆ.
ಎ.ಎಸ್. ಪೊನ್ನಣ್ಣ, ವಿರಾಜಪೇಟೆ ಶಾಸಕ
ಅಧಿಕವಾಗಿ ಸುರಿಯುತ್ತಿರುವ ಮಳೆ ಗಾಳಿಯಿಂದಾಗಿ ಗಿಡದ ರೆಂಬೆಗಳು ಮುರಿದಿವೆ. ಕಾಫಿಗೆ ಕೊಳೆರೋಗ ಬಾಧಿತವಾಗಿ ಕಾಫಿ ಕಾಯಿಗಳು ಕಪ್ಪಗಾಗಿ ಕೊಳೆತು ಉದುರಿ ಇತರ ಗಿಡಗಳಿಗೂ ಹಬ್ಬಿದೆ. ಕಾಫಿ ನಷ್ಟ ತಡೆಗಟ್ಟಲು ಕಾಫಿ ಮಂಡಳಿ, ಸಂಶೋಧನಾ ತಜ್ಞರು, ಅಧಿಕಾರಿಗಳು ತೋಟಗಳಿಗೆ ಭೇಟಿ ನೀಡಿ ಬೆಳೆಗಾರರೊಂದಿಗೆ ಸಂವಾದ ನಡೆಸಿ ಸೂಕ್ತ ಪರಿಹಾರವನ್ನು ಬೆಳೆಗಾರರಿಗೆ ನೀಡಬೇಕು. ರೈತರಿಗೆ ಬೇಕಾದ ರಸಗೊಬ್ಬರ, ಕೀಟನಾಶಕ, ಪರಿಕರಗಳನ್ನು ಹೆಚ್ಚಿನ ರಿಯಾಯಿತಿ ದರದಲ್ಲಿ ಕೊಡಬೇಕು.
ಮಣವಟ್ಟಿರ ಜಗದೀಶ್, ಕಾಫಿ ಬೆಳೆಗಾರ, ನೆಲಜಿ ಗ್ರಾಮ