

ಮೈಸೂರು: ಎರಡ್ಮೂರು ದಿನಗಳಿಂದ ಮಳೆ ಬರುತ್ತಿದ್ದರೂ ತರಾತುರಿಯಲ್ಲಿ ರಜೆ ಘೋಷಿಸಿದ್ದು ಯಾಕೆ? ಪಾಲಕರು ಮಕ್ಕಳನ್ನು ಶಾಲೆಗೆ ಬಿಟ್ಟ ಮೇಲೆ ರಜೆ ಕೊಟ್ಟಿದ್ದೀರಿ, ಅನನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಎಚ್ಚರಿಕೆ ವಹಿಸುವಂತೆ ಸಚಿವ ಎಸ್.ಟಿ. ಸೋಮಶೇಖರ್ ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೆಳೆ ಹಾನಿ ಕುರಿತ ಸಭೆಯಲ್ಲಿ ಮಾತಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ನೆನ್ನೆ ಮಳೆ ಬಂದಿತ್ತು. ಮಧ್ಯಾಹ್ನ ಬಿಸಿಲಿತ್ತು. ರಾತ್ರಿ ಮಳೆ ಬರಲಿಲ್ಲ. ಬೆಳಿಗ್ಗೆ ರಜೆ ಕೊಡಲಾಯಿತು. ಅನಂತರ ಮಳೆ ನಿಂತಿದೆ. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇಲ್ಲದ ಕಾರಣ ತೊಂದರೆಯಾಗಿದೆ ಎಂದರು. ಶಾಸಕ ಜಿ.ಟಿ.ದೇವೇಗೌಡ ಅವರು ಗೌರಿ-ಗಣೇಶ ಹಬ್ಬಕ್ಕೆ ರಜೆ ಕೊಡುವಂತೆ ಹೇಳಿದರು.