ಕೆಲಸ ಮಾಡದಿದ್ದರೆ ಮನೆಗೆ ಕಳಿಸುವೆ

Minister Santosh Lad Talking in KDP Meeting
ಪಟ್ಟಣದಲ್ಲಿನ ತಾಲೂಕು ಪಂಚಾಯಿತಿಯ ಕಾರ್ಯಲಯದಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
Published on

ಕಲಘಟಗಿ: ಕಳೆದ ಐದು ವರ್ಷದ ನಿಮ್ಮ ಆಡಳಿತದಲ್ಲಿ ಜನ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಇನ್ಮುಂದೆ ಆರೀತಿ ಆದರೆ ಸಂಬಂಧಪಟ್ಟ ಅಧಿಕಾರಿಗಳನ್ನ ತಕ್ಷಣ ಮನೆಗೆ ಕಳಿಸುತ್ತೇನೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪಟ್ಟಣದ ತಾಲೂಕು ಪಂಚಾಯಿತಿ ಕಾರ್ಯಲಯದಲ್ಲಿ ಮಂಗಳವಾರ ಆಯೋಜಿಸಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಅನಧಿಕೃತ ಮದ್ಯ ಮಾರಾಟಕ್ಕೆ ತಕ್ಷಣ ಕಡಿವಾಣ ಹಾಕಬೇಕು ಎಂದು ಅಬಕಾರಿ ನಿರೀಕ್ಷಕ ಅಮಿತ್ ಬೆಳ್ಳೂಬ್ಬಿ ಅವರಿಗೆ ಸೂಚಿಸಿದರು.

ತಾಲೂಕಿನ ಯಾವುದೇ ಅಧಿಕಾರಿಗಳ ವರ್ಗಾವಣೆ ಮಾಡುವ ಉದ್ದೇಶ ನನಗಿಲ್ಲ. ಅಧಿಕಾರಿಗಳು ಸ್ಥಳೀಯವಾಗಿ ಮನೆ ಮಾಡಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕು. ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಲೂಕಿನಲ್ಲಿ ಕಂದಾಯ ಭೂಮಿ ಹಾಗೂ ಕೃಷಿ ಭೂಮಿ ಎಷ್ಟು ಇದೆ ಎಂದು ವರದಿ ನೀಡಲು ಕೃಷಿ ಅಧಿಕಾರಿ ಹಾಗೂ ತಹಸೀಲ್ದಾರ್‌ಗೆ ಸಚಿವರು ಸೂಚಿಸಿದರು.

ಹೆಸ್ಕಾಂ ಇಂಜಿನಿಯರ್‌ಗೆ ಶಾಕ್!

ಹೆಸ್ಕಾಂ ಎಂಜಿನಿಯರ್ ಹೊನ್ನೂರಪ್ಪ ಅವರಿಗೆ, ತಾಲೂಕಿನಲ್ಲಿ ಏಷ್ಟು ಯೂನಿಟ್ ವಿದ್ಯುತ್ ಖರ್ಚು ಆಗುತ್ತದೆ ಎಂದು ಸಚಿವರು ಮಾಹಿತಿ ಕೇಳಿದರು ಅದಕ್ಕೆ ಈ ಕುರಿತು ನಾನು ಮಾಹಿತಿ ಕಲೆ ಹಾಕಿಲ್ಲ ಎಂದು ಹೇಳಿದರು. ನಿಮ್ಮ ಸ್ವಂತ ಕಂಪನಿ ಇದ್ದರೆ ಹೇಳುತ್ತಿದ್ದಿರಿ, ಸರ್ಕಾರಿ ಆಸ್ತಿ ಎಂದರೆ ನಿರ್ಲಕ್ಷ್ಯ ಏಕೆ ಎಂದು ತರಾಟೆಗೆ ತೆಗೆದುಕೊಂಡರು.

ಅರಳಿಕಟ್ಟಿ ಕ್ರಾಸ್ ಹಾಗೂ ದೇವಿಕೊಪ್ಪ, ಬಮ್ಮಿಗಟ್ಟಿ ಗ್ರಾಮದ ಹತ್ತಿರ ವಿದ್ಯುತ್ ಗ್ರಿಡ್ ಮಂಜೂರು ಆಗಿದ್ದು, ಭೂಮಿ ಸಮಸ್ಯೆಯಿಂದ ಬಾಕಿ ಇವೆ ಎಂದಾಗ ಕೂಡಲೇ ಮೂರು ಕಡೆ ಭೂಮಿ ಒದಗಿಸಲು ನಾನು ಪ್ರಯತ್ನ ಮಾಡುತ್ತೇನೆ. ಸಾರ್ವಜನಿಕ ವಿದ್ಯುತ್ ಟ್ರಾನ್ಸ್‌ಫರ್ಮರ್ ಸುಟ್ಟರೆ ಕೂಡಲೇ ಅಳವಡಿಸಲು ಹೆಚ್ಚುವರಿ ಆಗಿ ಟ್ರಾನ್ಸ್‌ಫರ್ಮರ್ ಇಟ್ಟುಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕು ವೈದ್ಯಾಧಿಕಾರಿಗೆ ಸರ್ಜರಿ!

ತಾಲೂಕು ಆಸ್ಪತ್ರೆ ಸ್ವಚ್ಛತೆಗಾಗಿ ಪ್ರತಿ ತಿಂಗಳು ಸರ್ಕಾರ 70 ಸಾವಿರ ರೂ. ನೀಡಿದರೂ ಸ್ವಚ್ಛತೆ ಕೈಗೊಳ್ಳುತ್ತಿಲ್ಲ ಎಂದು ತಾಲೂಕು ವೈದ್ಯಾಧಿಕಾರಿ ಅವರನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಜೂ. 15ರಂದು ಆಸ್ಪತ್ರೆಗೆ ಭೇಟಿ ನೀಡುತ್ತೇನೆ. ಆಗ ಅಲ್ಲಿ ಸ್ವಚ್ಛತೆ ಕಾಣದಿದ್ದರೆ ಕ್ರಮ ಖಚಿತ ಎಂದು ಸೂಚಿಸಿದರು.

ಸಚಿವರ ಪ್ರಮುಖ ಸೂಚನೆಗಳು

  • ಶೀಘ್ರದಲ್ಲಿ ಸಾರಿಗೆ ಅಧಿಕಾರಿಗಳ ಸಭೆ ಯೋಜಿಸಿ
  • ಪೊಲೀಸರು ರಾಜಕೀಯ ಒತ್ತಡಗಳಿಗೆ ಮಣಿಯದೆ ಕಾರ್ಯ ನಿರ್ವಹಿಸಿ
  • ತಹಸೀಲ್ದಾರ್ ಕಚೇರಿಯಲ್ಲಿ ಬಾಕಿ ಉಳಿದ ಪ್ರಕರಣ ಕೂಡಲೇ ವಿಲೇವಾರಿ ಮಾಡಿ
  • ಕಾಮಗಾರಿಗಳು ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಿ
  • ಅರಣ್ಯದಂಚಿನ ಗ್ರಾಮಗಳ ಜನರಿಗೆ ತೊಂದರೆ ನೀಡಬೇಡಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net