

ಮೈಸೂರು: ಐಒಟಿ ತಂತ್ರಜ್ಞಾನವನ್ನು ಕಾರಿಗೆ ಅಳವಡಿಸಿದರೆ ಸಂಚಾರ ನಿಯಮದ ಪ್ರಕಾರವೇ ಕಾರು ಚಲಿಸುವಂತೆ ಮಾಡಬಹುದು. ಇದರಿಂದ ಸಂಚಾರ ಉಲ್ಲಂಘನೆಗೆ ದಂಡ ತೆರುವುದನ್ನು ತಪ್ಪಿಸಬಹುದು ವಿಜ್ಞಾನಿ ಪ್ರೊ.ಬಾಲಸುಬ್ರಹ್ಮಣ್ಯನ್ ಹೇಳಿದರು.
ಮಾನಸಗಂಗೋತ್ರಿಯ ಜಿಐಎಸ್ ಹಾಗೂ ಭೂಗೋಳ ಅಧ್ಯಯನ ವಿಭಾಗವು ಗುರುವಾರ ಹಮ್ಮಿಕೊಂಡಿದ್ದ ಜಿಐಎಸ್ ಎಡ್ಯುಕೇಟರ್ ಅಧ್ಯಾಪಕರಿಗೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಕೇವಲ ಕಾರು ಮಾತ್ರವಲ್ಲದೆ ಭೂಮಿಯ ಮೇಲಿನ ಎಲ್ಲ ಕ್ಷೇತ್ರವನ್ನು ಐಒಟಿ ತಂತ್ರಜ್ಞಾನದ ಮೂಲಕ ನಿಯಂತ್ರಿಸಬಹುದು. ಜರ್ಮನಿಯಲ್ಲಿ ಈಗಾಗಲೇ ಈ ತಂತ್ರಜ್ಞಾನದ ಬಳಕೆ ಪ್ರಾರಂಭವಾಗಿದೆ ಎಂದರು.
ಐಒಟಿ ತಂತ್ರಜ್ಞಾನವನ್ನು ಕಾರಿಗೆ ಅಳವಡಿಸಿದ್ದೇ ಆದಲ್ಲಿ, ಸಂಚಾರ ನಿಯಮದಡಿಯೇ ಚಲಿಸುವಂತಾಗುತ್ತದೆ. ಉಲ್ಲಂಘನೆಯೂ ಆಗುವುದಿಲ್ಲ. ದಂಡವೂ ತೆರಬೇಕಾಗಿಲ್ಲ. ಜರ್ಮನಿಯಲ್ಲಿ ಈಗಾಗಲೇ ಇದರ ಅಳವಡಿಕೆಯು ನಡೆದಿದೆ. ಕೋಟ್ಯಾಂತರ ತಾಂತ್ರಿಕ ಸಾಧನಗಳಿಗೆ ನಿರ್ದೇಶನವನ್ನು ಐಒಟಿ ಮೂಲಕ ನೀಡಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ತಂತ್ರಜ್ಞಾನದಿಂದ ಒಳಿತು, ಕೆಡುಕು ಎರಡೂ ಇದೆ. ಅದನ್ನು ಉತ್ತಮ ಉದ್ದೇಶ ಹಾಗೂ ಮಾನವೀಯ ಕಾರ್ಯಗಳಿಗೆ ಬಳಸಬೇಕು. ಇಲ್ಲದಿದ್ದರೆ ದುಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮಾತನಾಡಿ, ಇನ್‌ಸ್ಟಾಗ್ರಾಮ್ ಹಾಗೂ ವಾಟ್ಸ್‌ಆ್ಯಪ್‌ನಲ್ಲಿ ಹೊಸ ಫೀಚರ್ ಬಂದರೆ ಅಪ್‌ಡೇಟ್ ಆಗುವಂತೆಯೇ ವಿದ್ಯಾರ್ಥಿಗಳು ಹೊಸ ವಿಷಯ ಹಾಗೂ ತಂತ್ರಜ್ಞಾನ ಕುರಿತ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಐಎಸ್‌ನ ಸಂಯೋಜಕಿ ಪ್ರೊ.ಪಿ.ಜಯಶ್ರೀ, ಸಂದರ್ಶಕ ಅಧ್ಯಾಪಕ ಪ್ರೊ.ರಾಮು, ಭೂಗೋಳ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಎಸ್‌ಅರುಣ್‌ದಾಸ್ ಹಾಗೂ ಇತರರು ಇದ್ದರು.