

ಬೆಂಗಳೂರು ಭಾರತದ ಭೌಗೋಳಿಕ ವೈವಿಧ್ಯತೆ ಉಳಿಸಲು ಕಠಿಣ ಕಾನೂನು ಅವಶ್ಯವಿದೆ. ಭಾರತದ ಭೌಗೋಳಿಕ ಸಂರಕ್ಷಣೆ ಮಾಡದಿದ್ದರೆ ಭವಿಷ್ಯದಲ್ಲಿ ಎಲ್ಲವೂ ಸರ್ವನಾಶವಾಗುವುದಲ್ಲದೆ, ಭಾರತ ವೈವಿಧ್ಯಮಯ ಭೌಗೋಳಿಕ ಪ್ರದೇಶ ಹೊಂದಿದ್ದರೂ ಯುನೆಸ್ಕೋ ಗ್ಲೋಬಲ್ ಜಿಯೋ ಪಾರ್ಕ್ ಸ್ಥಾನ ಸಿಗದಿರುವುದು ಬೇಸರದ ಸಂಗತಿ ಎಂದು ವಾಡಿಯಾ ಇನ್‌ಸ್ಟಿಟ್ಯೂಟ್ ಆ್ ಹಿಮಾಲಯನ್ ಜಿಯಾಲಾಜಿ ನಿರ್ದೇಶಕ ಮಹೇಶ್ ಜಿ ಠಕ್ಕರ್ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ವಿಶ್ವವಿದ್ಯಾಲಯ, ಜಿಯೋಲಾಜಿಕಲ್ ಸೊಸೈಟಿ ಆ್ ಇಂಡಿಯಾ ಮತ್ತು ಭೂವಿಜ್ಞಾನ ಸಚಿವಾಲಯ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಭೂವೈವಿಧ್ಯ ದಿನಾಚರಣೆ- 2024ರಲ್ಲಿ ಅವರು ಮಾತನಾಡಿದರು.
ಭಾರತ ಸಾಕಷ್ಟು ಸಂಪದ್ಭರಿತ ಭೂವೈವಿಧ್ಯತೆ ಹೊಂದಿರುವ ರಾಷ್ಟ್ರವಾಗಿದೆ. ಪರ್ವತ ಶ್ರೇಣಿ, ದಖನ್ ಪ್ರಸ್ಥಭೂಮಿ, ಪಶ್ಚಿಮ ಘಟ್ಟ, ಕರವಾಳಿ ಪ್ರದೇಶ, ಬೆಟ್ಟ,ಗುಡ್ಡ, ಗುಹೆಗಳನ್ನು ಹೊಂದಿದೆ. ಪೂರ್ವದಿಂದ ಪಶ್ಚಿಮದವರೆಗೂ, ಉತ್ತರದಿಂದ ದಕ್ಷಿಣವರೆಗೂ ವೈವಿಧ್ಯತೆಗಳಿಂದ ಕೂಡಿದೆ. ಭಾರತದ ಭೂಪ್ರದೇಶ ಅಥವಾ ಭೂಪದರಗಳ ರಚನೆ ಅಧ್ಯಯನ, ಸಂಶೋಧನೆಗೆ ಯೋಗ್ಯವಾದುದು. ಭಾರತದ ಭೂ ಪದರಗಳ ಆವರ್ತಕ ಬದಲಾವಣೆ ಸಂಶೋಧನೆಯಿಂದ ಭೂತಕಾಲದ ಘಟನೆಗಳಿಂದ ಹಿಡಿದು ಭವಿಷ್ಯದ ಹವಾಮಾನ ಬದಲಾವಣೆಗಳವರೆಗೂ ಎಲ್ಲವನ್ನೂ ಅಂದಾಜಿಸಬಹುದು ಎಂದರು.
1991ರಲ್ಲಿ ಯುನೆಸ್ಕೋ 40-45 ದೇಶಗಳಲ್ಲಿ ಜಿಯೋ ಪಾರ್ಕ್‌ಗಳನ್ನು ಗುರುತಿಸಿ ಮಾನ್ಯತೆ ನೀಡಿದೆ. ವೈವಿಧ್ಯತೆಗಳನ್ನೆ ತುಂಬಿರುವ ಭಾರತ ಜಿಯೋ ಪಾರ್ಕ್ ಸ್ಥಾನ ಹೊಂದಿಲ್ಲ. 2015 ರಿಂದ ನಿರಂತರ ಪ್ರಯತ್ನ ಸಾಗುತ್ತಿದ್ದರೂ ಯಶಸ್ಸು ಕಂಡಿಲ್ಲ. ಕೇಂದ್ರ ಸರ್ಕಾರ, ಸಂಬಂಧಪಟ್ಟ ಸಚಿವಾಲಯ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾಗಿದೆ ಎಂದು ಸಲಹೆ ನೀಡಿದರು.
ಭಾರತದಲ್ಲಿ ಭೂವೈವಿಧ್ಯತೆಯನ್ನು ಲಘುವಾಗಿ ಕಾಣಲಾಗುತ್ತದೆ. ಭಾರತಕ್ಕಿಂತ ಬಡರಾಷ್ಟ್ರಗಳೆ ನಮಗಿಂತ ಉತ್ತಮವಾಗಿ ಭೂವೈವಿಧ್ಯತೆ ನೀತಿ ರೂಪಿಸಿ, ನಿರ್ವಹಣೆ ಮಾಡುತ್ತಿದ್ದಾರೆ. ನದಿತಟದಲ್ಲಿ ಒಂದಿಷ್ಟು ನಿಷೇಧ ಹೇರಬೇಕು ಎಂಬ ನಿಯಮವಿದ್ದರೂ ನಿಯಮಗಳು ಗಾಳಿಗೆ ತೂರಲಾಗಿದೆ. ನದಿ ಪ್ರದೇಶ ಕಲುಷಿತಗೊಂಡಿದೆ. ಪರ್ವತ, ಸಮುದ್ರತಟದಲ್ಲಿ ಮಾಲಿನ್ಯ ಅತಿಯಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಗಣಿಗಾರಿಕೆ, ಮಾನವ ಸಂಬಂಧಿ ಚಟುವಟಿಕೆ ನಡೆಯುತ್ತಿದೆ. ಹೀಗಾದಲ್ಲಿ ವೈವಿಧ್ಯಮಯ ಸಂಪತ್ತನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಬೆಂವಿವಿ ಕುಲಪತಿ ಡಾ. ಎಸ್.ಎಂ. ಜಯಕರ, ಜಿಯೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾ ಅಧ್ಯಕ್ಷ ಪ್ರೊ. ಹರ್ಷ ಗುಪ್ತ, ಕಾರ್ಯದರ್ಶಿ ಡಾ. ಕೆ.ವಿ. ಕೃಷ್ಣಮೂರ್ತಿ, ಬೆಂವಿವಿ ಭೂವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಎನ್. ಮಲರ್ಕೋಡಿ, ಡೀನ್ ಅಶೋಕ್ ಡಿ. ಹಂಜಗಿ ಉಪಸ್ಥಿತರಿದ್ದರು.