

ಕಡೂರು: ಬಂಜಾರ ಸಮಾಜದ ಬೆಳವಣಿಗೆಗೆ ಸಂತ ಸೇವಾಲಾಲರ ಕೊಡುಗೆ ಅಪಾರ ಎಂದು ಪ್ರಭಾರ ತಹಸೀಲ್ದಾರ್ ಎನ್.ಆರ್.ಮಂಜುನಾಥ ಸ್ವಾಮಿ ಹೇಳಿದರು.
ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಸಮಾಜ ಇತರೆ ಸಮಾಜಗಳೊಂದಿಗೆ ಬೆರೆತು ಜೀವನ ಸಾಗಿಸುವ ಸಮಾಜವಾಗಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ವಾಸಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದವರು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗಳಲ್ಲಿ ಅಲಂಕರಿಸುತ್ತಿರುವುದು ಹೆಮ್ಮೆಯ ಸಂಗತಿ. ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿದಾಗ ಸಮಾಜದ ಪ್ರಗತಿಗೆ ಸಾಧ್ಯವಾಗಲಿದೆ ಎಂದರು.
ತಾಪಂ ಇಒ ಸಿ.ಆರ್.ಪ್ರವೀಣ್ ಮಾತನಾಡಿ, ಈ ಹಿಂದೆ ಬುಡಕಟ್ಟು ಜನಾಂಗದವರು, ಅಲೆಮಾರಿಗಳಾಗಿ, ಗ್ರಾಮಗಳಿಂದ ದೂರ ಉಳಿದು ತಾಂಡಾಗಳಲ್ಲಿ ಜೀವನ ಮಾಡುತ್ತಿದ್ದ ಹಿಂದುಳಿದ ಬಂಜಾರ ಸಮಾಜವನ್ನು ಸಂತ ಸೇವಾಲಾಲರು ರಾಜ್ಯಾದ್ಯಂತ ಸಂಚರಿಸಿ ಸಮಾಜವನ್ನು ಒಗ್ಗೂಡಿಸಿ ಸಮಾಜವನ್ನು ಮುಖ್ಯವಾಹಿನಿಗೆ ಕರೆತರುವಲ್ಲಿ ಹೆಚ್ಚು ಶ್ರಮವಹಿಸಿದ್ದರು. ಪವಾಡ ಪುರುಷರಾಗಿರುವ ಸಂತ ಸೇವಾಲಾಲ್ ತತ್ವಾದರ್ಶಗಳು ಪ್ರಸ್ತುತವಾಗಿವೆ ಎಂದರು.
ಗ್ಯಾರಂಟಿ ಅನುಷ್ಠ್ಠಾನ ಸಮಿತಿ ತಾಲೂಕು ಅಧ್ಯಕ್ಷ ಆಸಂದಿ ಕಲ್ಲೇಶ್, ಬಂಜಾರ ಸಮಾಜದ ಅಧ್ಯಕ್ಷ ತಾಲೂಕು ಕುಮಾರನಾಯ್ಕ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮೋಹನ್ ನಾಯ್ಕ, ಶಶಿಕುಮಾರ್, ತಾಪಂ ಮಾಜಿ ಸದಸ್ಯರಾದ ಹಳೇಹಟ್ಟಿ ಆನಂದನಾಯ್ಕ, ದೇವರಾಜನಾಯ್ಕ, ರಾಮಚಂದ್ರನಾಯ್ಕ, ಬಸವರಾಜ್‌ನಾಯ್ಕ ಮತ್ತಿತರಿದ್ದರು.