

ಬ್ಯಾಡಗಿ: ಬಡವರು, ರೈತರು, ಕೂಲಿ ಕಾರ್ವಿುಕರು, ಶೋಷಿತರನ್ನು ರಕ್ಷಿಸುವಲ್ಲಿ ಎಲ್ಲ ಸರ್ಕಾರಗಳು ವಿಫಲವಾಗುತ್ತಿದ್ದು, ಇನ್ನುಮುಂದೆ ರೈತ ಮಹಿಳೆಯರು, ಕೂಲಿಕಾರ್ವಿುಕರ ಮನೆಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಸಾಲ ವಸೂಲಿಗಾಗಿ ಕಾಲಿಟ್ಟರೆ ನಾವು ಶಕ್ತಿ ಸಿದ್ಧಾಂತ ಅಳವಡಿಸಿ ಬಲಪ್ರಯೋಗಕ್ಕೆ ಇಳಿಯಬೇಕಾಗುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಎಚ್ಚರಿಸಿದರು.
ಪಟ್ಟಣದ ರೈತ ಸಂಘದ ಕಾರ್ಯಾಲಯದಲ್ಲಿ ವಿಶ್ವಚೇತನ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ 89ನೇ ಜನ್ಮದಿನ ಆಚರಣೆ ಬಳಿಕ ಮೈಕ್ರೋ ಫೈನಾನ್ಸ್ಗಳ ವಿರುದ್ಧ ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆ ಉದ್ದೇಶಿಸಿ ಅವರು ಮಾತನಾಡಿದರು.
ಅನಾಮಧೇಯ ಹಾಗೂ ಅನಧೀಕೃತ ಫೈನಾನ್ಸ್ಗಳು ಜಿಲ್ಲಾದ್ಯಂತ ಕಾರ್ಯನಿರ್ವಹಿಸುತ್ತಿವೆ. ನಿಯಮ ಮೀರಿ ಬಡವರಿಂದ ಬಡ್ಡಿ ಹಣವನ್ನು ಗೂಂಡಾಗಳ ಮೂಲಕ ದಬ್ಬಾಳಿಕೆ ನಡೆಸಿ ವಸೂಲಿ ಮಾಡಲಾಗುತ್ತಿದೆ. ವಸೂಲಾತಿ ಸಿಬ್ಬಂದಿಗೆ ಹೆಚ್ಚಿನ ಕಮಿಷನ್ ನೀಡುವ ಆಮಿಷ ಒಡ್ಡಿ ಅವರನ್ನು ರಾತ್ರಿ ಹೊತ್ತಲ್ಲಿ ಕಳುಸಲಾಗುತ್ತಿದೆ. ಬಡ್ಡಿ ಕಟ್ಟಲು ಹಣವಿಲ್ಲದಿದಲ್ಲಿ ಮೊಬೈಲ್ ಸೇರಿದಂತೆ ಸಿಕ್ಕ ಬೆಲೆ ಬಾಳುವ ಸಾಮಗ್ರಿ ಒಯ್ಯುತ್ತಿದ್ದಾರೆ. ಸಾಲ ಪಡೆದ ಜನರು ಮರ್ಯಾದೆಗೆ ಅಂಜಿ ಆತ್ಮಹತ್ಯೆ ಯತ್ನ, ಊರು ಬಿಟ್ಟು, ಕುಟುಂಬಗಳಿಂದ ದೂರವಾಗುತ್ತಿದ್ದಾರೆ. ಇಂತಹ ಅಮಾನವೀಯ ಅನಾಗರಿಕ ಕೃತ್ಯಗಳು ನಡೆಯುತ್ತಿದ್ದರೂ ಸತ್ಯವನ್ನು ಮರೆಮಾಚಲು ಸುಗ್ರೀವಾಜ್ಞೆ ವಿಷಯ ಮುಂದಿಟ್ಟುಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಟಾಪಟಿ ನಡೆಸುತ್ತಿರುವುದನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಬೆಳೆ ನಷ್ಟ, ಕೂಲಿ ಇಲ್ಲದಿರುವ ಸಂದರ್ಭದಲ್ಲಿ ಬಡವರು, ಕೂಲಿಕಾರರು ಹಣ ಕಟ್ಟಲು ಆಗದಿದ್ದಲ್ಲಿ ಫೈನಾನ್ಸ್ಗಳ ಸಿಬ್ಬಂದಿ ತೊಂದರೆ ನೀಡುತ್ತಿದ್ದಾರೆ. ಹಣ ಕಟ್ಟುವುದು ಒಂದು ತಾಸು ತಡವಾದರೂ ದಂಡ ವಸೂಲು ಮಾಡುವುದನ್ನು ಕೆಲವರು ದಂಧೆ ಮಾಡಿಕೊಂಡಿದ್ದಾರೆ. ಇಂತಹ ಕಂಪನಿಗಳ ವಿರುದ್ಧ ರೈತ ಸಂಘದ ವತಿಯಿಂದಲೇ ಡೈರೆಕ್ಟ್ ಆಕ್ಷನ್ ಚಳವಳಿ ನಡೆಸಲು ನಿರ್ಧರಿಸಿ, ಬ್ಯಾಡಗಿಯಲ್ಲಿ ಮುನ್ನುಡಿ ಇಟ್ಟಿದ್ದೇವೆ. ಹಣಕ್ಕಾಗಿ ಕಿರುಕುಳ ನೀಡಿದರೆ ಹುಷಾರ್ ಎಂದು ಎಚ್ಚರಿಸಿದರು. ಸಂಘದ ತಾಲೂಕಾಧ್ಯಕ್ಷ ರುದ್ರನಗೌಡ ಕಾಡನಗೌಡ್ರ, ಕಿರಣ ಗಡಿಗೋಳ, ಸಿ.ಎಸ್. ಭೋವಿ, ಕೆ.ಎಸ್. ದೊಡ್ಡಗೌಡ್ರ, ಚಿಕ್ಕಪ್ಪ ಛತ್ರದ ಹಾಗೂ ವಿವಿಧ ತಾಲೂಕಿನ ಪದಾಧಿಕಾರಿಗಳು ಇದ್ದರು.