ದುರಾಸೆ ಮುಂದುವರಿದರೆ ಜೀವಕುಲವೇ ನಾಶ

11
Published on

ಮೈಸೂರು: ಭಾರತೀಯ ಜೈನ ಸಂಘಟನೆ, ಪರಿಸರ ಬಳಗ, ಪಿಂಜರಾಪೋಲ್ ಸೊಸೈಟಿ, ಕ್ಲೀನ್ ಮೈಸೂರು ಫೌಂಡೇಷನ್, ಪರಿಸರಕ್ಕಾಗಿ ನಾವು ಮತ್ತು ಪ್ರಗತಿ ಒಕ್ಕಲಿಗ ಮಹಿಳಾ ಸಂಘದಿಂದ ನಗರದ ಪಿಂಜರಾಪೋಲ್ ಸೊಸೈಟಿ ಆವರಣದಲ್ಲಿ ವಿವಿಧ ಬಗೆಯ ಗಿಡಗಳನ್ನು ನೆಡುವ ಮೂಲಕ ಬುಧವಾರ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಹಿರಿಯ ಸಾಹಿತಿ ಡಾ.ಕಾಳೇಗೌಡ ನಾಗವಾರ ಮಾತನಾಡಿ, ಕಲುಷಿತಗೊಳ್ಳುತ್ತಿರುವ ಪರಿಸರವನ್ನು ಕಾಪಾಡುವುದು ಎಲ್ಲರ ಕರ್ತವ್ಯವಾಗಿದೆ. ಮನುಷ್ಯನ ಮಿತಿಮೀರಿದ ದುರಾಸೆಯಿಂದ ಇಂದು ಪರಿಸರ ವಿನಾಶದತ್ತ ಸಾಗುತ್ತಿದೆ. ಇದು ಹೀಗೆಯೇ ಮುಂದುವರಿದರೆ ಇಡೀ ಜೀವಕುಲವೇ ನಾಶವಾಗುತ್ತದೆ ಎಂದು ಎಚ್ಚರಿಸಿದರು.
ಪರಿಸರ ಬಳಗದ ಪರಶುರಾಮೇಗೌಡ, ಪ್ರೊ.ಕಾಳಚನ್ನೇಗೌಡ ಅವರು ಪರಿಸರ ಸಂರಕ್ಷಣೆ, ಅದರ ಅಗತ್ಯತೆ ಕುರಿತು ಮಾತನಾಡಿದರು. ಮೈಸೂರು ಪಿಂಜರಾಪೋಲ್ ಸೊಸೈಟಿಯ ಕಾರ್ಯದರ್ಶಿ ವಿನೋದ್ ಖಾಬಿಯ, ಕ್ಲೀನ್ ಮೈಸೂರು ಫೌಂಡೇಷನ್ ಲೀಲಾ ಶಿವಕುಮಾರ್, ಭಾರತೀಯ ಜೈನ ಸಂಘಟನೆಯ ನಗರ ಅಧ್ಯಕ್ಷ ಪ್ರವೀಣ್ ಲುಂಕರ್, ಸಂಘಟಕರಾದ ಸಮತಿಲಾಲ್ ಪಗಾರಿಯಾ, ರಾಗಿಣಿ ಅಲನಹಳ್ಳಿ, ಜೈನ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಪ್ರಕಾಶ್ ಗುಲೆಚ್ಚ, ವಲಯ ಅಧ್ಯಕ್ಷ ಸುಖ್‌ರಾಜ್ ವಿನಾಯಕಿ, ದೀಪಕ್ ಬೋಹರಾ, ಮಾಜಿ ಅಧ್ಯಕ್ಷ ಅಶೋಕ್ ಸಾಲೇಶ, ಪ್ರಕಾಶ್, ವಿಮಲ್ ಪೀತಾಲಿಯಾ, ಪಿಂಜರಾಪೋಲ್ ಅಧ್ಯಕ್ಷ ಸುಮತಿಲಾಲ್ ಪಗರಿ ಇತರರು ಇದ್ದರು.
ನಿನ್ನೆಯಷ್ಟೇ ತಾಯಿಯನ್ನು ಕಳೆದುಕೊಂಡ ಕಾಮಾಕ್ಷಿ ಗೌಡ ಅವರು ಇಂದಿನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ತಾಯಿ ನೆನಪಿನಲ್ಲಿ 9 ಸಸಿಗಳನ್ನು ನೆಟ್ಟು ಸಂರಕ್ಷಣೆ ಸಂದೇಶ ಸಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net