ಗ್ರಾಪಂ ಚುನಾವಣೆಲ್ಲಿ ಗೆದ್ದರೆ ಅಧಿಕಾರ ಸಲೀಸು, ಶಾಸಕ ಕೃಷ್ಣ ಭೈರೇಗೌಡ ಅಭಿಮತ, ಆಲೂರು ದುದ್ದನಹಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

A.1.KND PHOTO-1B
Published on

ಕುಂದಾಣ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಗೆದ್ದರೆ ಮುಂದೆ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗುತ್ತದೆ ಎಂದು ಶಾಸಕ ಕೃಷ್ಣ ಭೈರೇಗೌಡ ಅಭಿಪ್ರಾಯಪಟ್ಟರು.

ಹೋಬಳಿಯ ಆಲೂರು ದುದ್ದನಹಳ್ಳಿ ಮತ್ತು ದ್ಯಾವರಹಳ್ಳಿಯಲ್ಲಿ ಗುರುವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಶೀಘ್ರವೇ ಗ್ರಾಪಂ ಚುನಾವಣೆ ದಿನಾಂಕ ೋಷಣೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಜನರ ವಿಶ್ವಾಸ ಗಳಿಸಿ, ಚುನಾವಣೆ ಎದುರಿಸಬೇಕು. ತಳಮಟ್ಟದಲ್ಲಿ ಅಧಿಕಾರ ಹಿಡಿದರೆ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಹೆಚ್ಚುತ್ತಿವೆ. ಇಂಥ ಕೃತ್ಯಗಳಲ್ಲಿ ರಾಜಕೀಯ ಪಕ್ಷಕ್ಕೆ ಸಂಬಂಧಪಟ್ಟವರೇ ಹೆಚ್ಚಾಗಿ ಭಾಗಿಯಾಗುತ್ತಿರುವುದು ಕಂಡುಬರುತ್ತಿದೆ ಎಂದು ಆರೋಪಿಸಿದರು.

ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಸಿ. ಶ್ರೀನಿವಾಸ್ ಮಾತನಾಡಿ, ಬೆಂಗಳೂರು ಗ್ರಾಮಾಂತರ ಪ್ರದೇಶದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅಂದಿನ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಕೆಸಿ ವ್ಯಾಲಿ ಮತ್ತು ಎನ್‌ಸಿ ವ್ಯಾಲಿ ಯೋಜನೆಯಿಂದ ಅಂತರ್ಜಲ ವೃದ್ಧಿಸಿ, ರೈತರಿಗೆ ಅನುಕೂಲವಾಗಿದೆ ಎಂದರು.

ಈಗ ಬಿಜೆಪಿ ಅಧಿಕಾರದಲ್ಲಿದ್ದು, ಬೇಕಾದ ರೀತಿಯಲ್ಲಿ ಮೀಸಲಾತಿ ವಿಂಗಡಿಸಿಕೊಂಡಿದ್ದಾರೆ. ಯಾವುದೇ ಮೀಸಲಾತಿ ಬಂದರೂ ತಕ್ಕ ಪ್ರತಿಸ್ಪರ್ಧೆ ಒಡ್ಡಲು ನಾವು ಸಿದ್ಧರಿದ್ದೇವೆ. ತಳಮಟ್ಟದ ಕಾರ್ಯಕರ್ತರೇ ಪಕ್ಷದ ಶಕ್ತಿ ಎಂದು ಹೇಳಿದರು.

ಮಾಜಿ ಶಾಸಕ ಮುನಿನರಸಿಂಹಯ್ಯ ಮಾತನಾಡಿ, ಆಲೂರು ದುದ್ದನಹಳ್ಳಿ ಗ್ರಾಮ ಪಂಚಾಯಿತಿ 12 ಸದಸ್ಯ ಬಲ ಹೊಂದಿದ್ದು ಕಳೆದ ಬಾರಿ ಆರು ಸ್ಥಾನಗಳನ್ನು ಗಳಿಸಿಕೊಂಡಿದ್ದೆವು. ಈ ಬಾರಿ ಹೆಚ್ಚಿನ ಸ್ಥಾನ ಗಳಿಸಬೇಕು. ಅಲ್ಲದೆ, ತಾಲೂಕಿನ 24 ಗ್ರಾಮ ಪಂಚಾಯಿತಿಗಳನ್ನೂ ದಕ್ಕಿಸಿಕೊಂಡು, ವಿಧಾನಸಭೆ ಚುನಾವಣೆಗೆ ಹಾದಿ ಸುಗಮಗೊಳಿಸಿಕೊಳ್ಳಬೇಕು ಎಂದರು.

ಜಿಪಂ ಸದಸ್ಯರಾದ ಕೆ.ಸಿ. ಮಂಜುನಾಥ್, ಅನಂತಕುಮಾರಿ, ರಾಧಮ್ಮ, ಕುಂದಾಣ ಹೋಬಳಿ ಅದ್ಯಕ್ಷ ಕೋದಂಡರಾಮು, ಚಿಕ್ಕಳ್ಳಾಪುರ ಲೋಕಸಭೆ ಯುವ ಕಾಂಗ್ರೆಸ್ ಅಧ್ಯಕ್ಷ ಮಾರುತಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net