ಫಯಾಜ್ ನಿರ್ದೋಷಿಯಾದರೆ ನಾವೇ ಶಿಕ್ಷಿಸುತ್ತೇವೆ

h23-Mutalik Neha
Published on

ಹುಬ್ಬಳ್ಳಿ: ನೇಹಾ ಹಿರೇಮಠ ಅವರ ಕೊಲೆ ಪ್ರಕರಣದ ಆರೋಪಿ ಫಯಾಜ್‌ನನ್ನು ಸಿಐಡಿ ತನಿಖೆಯಿಂದ ನಿರ್ದೋಷಿ ಎಂದು ಸಾಬೀತಾಗಿ ಹೊರಗೆ ಬಂದರೆ, ಅವನಿಗೆ ನಾವೇ ತಕ್ಕ ಶಿಕ್ಷೆ ವಿಧಿಸುತ್ತೇವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ನಗರದ ಬಿಡನಾಳದ ನೇಹಾ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ, ತಂದೆ-ತಾಯಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು.
ಪ್ರಕರಣದ ತನಿಖೆ ಸಿಐಡಿಗೆ ಒಪ್ಪಿಸಿರುವುದು ಸ್ವಾಗತಾರ್ಹ. ಆದರೆ, ರಾಜ್ಯ ಸರ್ಕಾರ ಒತ್ತಡ ಹೇರಿ ತನಿಖೆಯ ದಾರಿ ತಪ್ಪಿಸಿದರೆ ಅದಕ್ಕೆ ತಕ್ಕ ಪಾಠ ಅನುಭವಿಸಬೇಕಾಗುತ್ತದೆ. ನಿರ್ದೋಷಿಯಾಗಿ ಫಯಾಜ್‌ಹೊರಗೆ ಬಂದರೆ, ನಾವೇ ಶಿಕ್ಷೆ ವಿಧಿಸಿ ಜೈಲಿಗೆ ಹೋಗಲು ಸಿದ್ಧರಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಪೊಲೀಸ್ ಇಲಾಖೆ ಸಮರ್ಥವಾಗಿದೆ. ಆದರೆ, ರಾಜಕೀಯ ವ್ಯಕ್ತಿಗಳು ಪೊಲೀಸ್ ಅಧಿಕಾರಿಗಳನ್ನು ದಾರಿ ತಪ್ಪಿಸುತ್ತಾರೆ. ಅವರ ಕೈಕಟ್ಟದೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಡಬೇಕು. ಮತ ಬ್ಯಾಂಕ್, ಮುಸ್ಲಿಮರ ಓಲೈಕೆ ಬಿಡಬೇಕು. ನೇಹಾಳನ್ನು ವ್ಯವಸ್ಥಿತವಾಗಿ ಕೊಲೆ ಮಾಡಿದ ಪ್ರಕರಣ ಇದಾಗಿದ್ದು, ತನಿಖೆ ವಿಳಂಬ ಮಾಡದೆ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಲವ್ ಜಿಹಾದ್ ಆಳವಾಗಿ ಬೇರೂರಿದೆ. ಪದೇ ಪದೆ ಇಂತಹ ಪ್ರಕರಣಗಳು ನಡೆಯುತ್ತಿವೆ. ಜಿಹಾದಿ ಮನಸ್ಥಿತಿಯವರಿಗೆ ಭಯವೇ ಇಲ್ಲದಂತಾಗಿದೆ. ನೇಹಾಗೆ 13 ಬಾರಿ ಚಾಕು ಇರಿದು ಕೊಲೆ ಮಾಡಲಾಗಿದೆ. ಆರೋಪಿ ಫಯಾಜ್‌ಗೆ ಸೂಕ್ತ ತರಬೇತಿ ನೀಡಿರುವ ಸಂಶಯವಿದ್ದು, ಸಿಐಡಿ ಅಧಿಕಾರಿಗಳು ಈ ಕುರಿತು ಆಳವಾದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ನೇಹಾ ಕೊಲೆ ಪ್ರಕರಣ ಕಾಂಗ್ರೆಸ್‌ಗೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತಿದೆ ಎಂದು, ಅದನ್ನು ಸರಿಪಡಿಸಲು ಮುಸ್ಲಿಮ ಸಮುದಾಯದವರಿಂದ ಸಾಂತ್ವನ, ಪ್ರತಿಭಟನೆ ಮಾಡಿಸಲಾಗುತ್ತಿದೆ. ಅಂಜುಮನ್ ಸಂಸ್ಥೆಯವರಿಗೆ ಅಷ್ಟೊಂದು ಕಳಕಳಿಯಿದ್ದರೆ, ಫಯಾಜ್ ಕುಟುಂಬಕ್ಕೆ ಬಹಿಷ್ಕಾರ ಹಾಕಬೇಕಿತ್ತು?. ಈಗಲೂ ಕಾಲ ಮಿಂಚಿಲ್ಲ, ಹಿಂದು ಹುಡುಗಿಯರನ್ನು ಪ್ರೀತಿಸಿದರೆ ಬಹಿಷ್ಕಾರ ಹಾಕುತ್ತೇವೆ, ಲವ್ ಜಿಹಾದ್ ನಡೆಸಿದರೆ ಸ್ಮಶಾನದಲ್ಲಿ ಜಾಗ ನೀಡುವುದಿಲ್ಲ. ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಫತ್ವಾ ಹೊರಡಿಸಲಿ. ಅದನ್ನು ಬಿಟ್ಟು ನಾಟಕ ಮಾಡುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಶೇಷ ತಂಡ ರಚನೆ: ಲವ್ ಜಿಹಾದ್ ನಿಯಂತ್ರಿಸಲು ಶ್ರೀರಾಮ ಸೇನೆಯು ವಿಶೇಷ ತಂಡ ರಚಿಸಿ, ಪ್ರತಿಯೊಂದು ಕಾಲೇಜಿನ ಕ್ಲಾಸ್ ರೂಮ್‌ನಲ್ಲಿ ತಂಡದ ಸದಸ್ಯರು ಇರುವಂತೆ ಮಾಡಲಿದೆ. ಯಾರು ಲವ್ ಜಿಹಾದ್‌ಗೆ ಬಲಿಯಾಗುತ್ತಿದ್ದಾರೆ ಎನ್ನುವುದನ್ನು ತಂಡ ಗಮನಿಸಲಿದೆ. ವಾರದಲ್ಲಿ ಸಹಾಯವಾಣಿ ಆರಂಭಿಸಿ, ವಿದ್ಯಾರ್ಥಿನಿಯರ ಸಮಸ್ಯೆಗೆ ಸ್ಪಂದಿಸಲಿದೆ. ಮಹಿಳೆಯರಿಗೆ ವಿಶೇಷ ತರಬೇತಿಯನ್ನೂ ನೀಡಲಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net