

ಕೆ.ಆರ್.ನಗರ: ದೇಶದ ಬೆನ್ನೆಲುಬಾಗಿರುವ ರೈತರು ಉತ್ತು ಬಿತ್ತಿ ಬೆಳೆದರೆ ಮಾತ್ರ ಜನರು ಸಂತಸ ಮತ್ತು ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಹೇಳಿದರು.
ತಾಲೂಕಿನ ಕೆಸ್ತೂರುಕೊಪ್ಪಲು ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ರೈತ ಪರ್ವ ಗ್ರಾಮ ಘಟಕ ಉದ್ಘಾಟನೆ ಮತ್ತು ಸ್ಪರ್ಧಾ ಸಮ್ಮಿಲನ ಸಹಬಾಳ್ವೆಗೆ ವರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರೈತರು ಸಂಘಟಿತರಾಗಬೇಕು ಆಳುವ ಸರ್ಕಾರಗಳು ನಮ್ಮ ಪರವಾದ ಯೋಜನೆ ಜಾರಿಗೆ ತರಲಿ ಎಂದು ರೈತ ಸಂಘಟನೆಗಳು ಬಯಸುವುದು ಸಹಜ. ಈ ದಿಸೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೆಲಸ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ದೇಶದಲ್ಲೇ ಜನಪರ ಯೋಜನೆಗಳ ಮೂಲಕ ಮಾದರಿಯಾಗಿರುವ ರಾಜ್ಯ ಸರ್ಕಾರ ಅನ್ನದಾತನ ನೆರವಿಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ದುಡಿಯುತ್ತಿದೆ ಎಂದು ಮಾಹಿತಿ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪ್ರಿಯತೆ ಸಹಿಸದ ಪ್ರತಿಪಕ್ಷಗಳು ಅಪಪ್ರಚಾರದಲ್ಲಿ ತೊಡಗಿದ್ದು ಜನರು ಇದಕ್ಕೆ ಉಪ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿದ್ದಾರೆಂದು ಛೇಡಿಸಿದರು.
ರೈತ ಸಂಘಟನೆಗಳ ಜನಮುಖಿ ಕಾರ್ಯಗಳಿಗೆ ಸದಾ ಬೆನ್ನೆಲುಬಾಗಿ ಇರುತ್ತೇನೆಂದು ಭರವಸೆ ನೀಡಿದ ದೊಡ್ಡಸ್ವಾಮೇಗೌಡರು, ಸರ್ಕಾರದ ಸವಲತ್ತುಗಳ ಪ್ರಯೋಜನ ಪಡೆದು ಆರ್ಥಿಕವಾಗಿ ಸದೃಢರಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂದು ಸಲಹೆ ನೀಡಿದರು.
ಗ್ರಾಮದ ವಕೀಲೆ ಕೆ.ಪ್ರಭಾವತಿ, ಸಾಧಕಿ ಪ್ರತಿಮಾ, ಗ್ರಾಪಂ ಅಧ್ಯಕ್ಷೆ ಮಂಜುಳಾ ಅವರನ್ನು ರೈತ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಕರ್ನಾಟಕದ ರಾಜ್ಯ ರೈತ ಸಂಘ ರೈತ ಪರ್ವದ ಅಧ್ಯಕ್ಷ ಅರುಣ್‌ಕುಮಾರ್, ಗೌರವಾಧ್ಯಕ್ಷ ಜೆ.ಎಂ.ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ತಾರಾಕುಮಾರ್, ಪ್ರಧಾನ ಕಾರ್ಯದರ್ಶಿ ಡಾ.ಉಮಾಪತಿ, ಮಹಿಳಾ ಘಟಕದ ಪ್ರಧನಾ ಕಾರ್ಯದರ್ಶಿ ರೂಪಾ, ಗ್ರಾಮ ಘಟಕದ ಅಧ್ಯಕ್ಷ ಕೆ.ಎಚ್.ಜಯರಾಮೇಗೌಡ ಮಾತನಾಡಿದರು.
ಸಿಡಿಪಿಒ ಅಣ್ಣಯ್ಯ, ರಾಜ್ಯ ಕಾರ್ಯಾಧ್ಯಕ್ಷ ವೈ.ಎಲ್.ನವೀನ್‌ಕುಮಾರ್, ಕೆ.ಆರ್.ನಗರ ತಾಲೂಕು ಅಧ್ಯಕ್ಷ ರಾಘವೇಂದ್ರ, ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಗೌರಮ್ಮ, ನಂಜನಗೂಡು ತಾಲೂಕು ರೈತ ಸಂಘದ ಅಧ್ಯಕ್ಷ ಕೃಷ್ಣಪ್ಪ, ಎಚ್.ಡಿ.ಕೋಟೆ ತಾಲೂಕು ರೈತ ಸಂಘದ ಕುಮಾರ್, ಯುವ ಘಟಕದ ಅಧ್ಯಕ್ಷ ಹೈರಿಗೆ ಸಿದ್ದಲಿಂಗೇಗೌಡ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಮ್ಮ, ರಾಜ್ಯ ಕಾರ್ಯದರ್ಶಿ ಚಾಮರಾಜ್ ಇತರರು ಇದ್ದರು.