ರೈತರು ಸುರಕ್ಷಿತರಾಗಿದ್ದರೆ ಕೃಷಿ ಇನ್ನಷ್ಟು ಸದೃಢ

17 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕಲ್ಲಂಗಡಿ ಬೆಳೆಗೆ ಕೆಂಪು ಹಾಗೂ ಮಸಾರೆ ಮಣ್ಣಿನ ಭೂಮಿ ಸೂಕ್ತ. ಸುಕ್ಷಿಶಿತ, ಸಾಹಸಿ ರೈತರಿಬ್ಬರು ಕಪ್ಪು ಜಮೀನಿನಲ್ಲಿ ಅಪರೂಪದ ಹಳದಿ ಕಲ್ಲಂಗಡಿ ಬೆಳೆದು ಸಾಧನೆ ಮಾಡಿದ್ದಾರೆ. ಸುಶಿಕ್ಷಿತ ರೈತರಿಂದ ಹೊಸ ಪ್ರಯೋಗಗಳು ಸಾಧ್ಯವಾಗಿ ಕೃಷಿ ಇನ್ನಷ್ಟು ಸದೃಢವಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ತಾಲೂಕಿನ ಕುರಬಗಟ್ಟಿ ಪ್ರಗತಿಪರ ರೈತ ಗುಡ್ಡಪ್ಪ ಮೈಲಾರ ತೋಟದಲ್ಲಿ ತೋಟಗಾರಿಕೆ ವತಿಯಿಂದ ಸೋಮವಾರ ಆಯೋಜಿಸಿದ್ದ ಹಳದಿ ಕಲ್ಲಂಗಡಿ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ಕೃಷಿ ಲಾಭದಾಯಕವಾಗಿಸಲು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಸರ್ಕಾರ ಕೃಷಿ ಲಾಭದಾಯಕ ಮಾಡಲು ಅನೇಕ ಸೌಲಭ್ಯ, ಸಹಾಯಧನ, ಸಬ್ಸಿಡಿ ನೀಡುತ್ತದೆ. ಇದನ್ನು ಉಪಯೋಗಿಸಿಕೊಳ್ಳಬೇಕು. ಪದವೀಧರ ಪ್ರಗತಿಪರ ರೈತರಾದ ಗುಡ್ಡಪ್ಪ ಮೈಲಾರ ಹಾಗೂ ಕಲ್ಲನಗೌಡ ಪಾಟೀಲ ಸಾಹಸಿ ರೈತರಾಗಿದ್ದು, ವಿನೂತನ ಬೆಳೆ ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ಹಳದಿ ಕಲ್ಲಂಗಡಿ ಬೆಳೆಯಲು ಎಕರೆಗೆ 80 ಸಾವಿರ ರೂ.ದಿಂದ 1 ಲಕ್ಷ ರೂ. ರ್ಖಚಾಗಲಿದೆ. ಸರ್ಕಾರದಿಂದ ಕಲ್ಲಂಗಡಿ ಬೆಳೆಯಲು ಹನಿ ನೀರಾವರಿಗೆ 75 ಸಾವಿರ ರೂ. ಸಬ್ಸಿಡಿ ಹಾಗೂ ಹೊಸ ಹೈಬ್ರಿಡ್​ ಬೀಜಗಳ ಬೆಳೆಗೆ ಸರ್ಕಾರದಿಂದ 8 ಸಾವಿರ ರೂ. ಪ್ರೋತ್ಸಾಹ ಧನವಿದೆ ಎಂದರು.

ಉತ್ತರ ಕರ್ನಾಟಕ ಭಾಗದಲ್ಲಿ ಧಾರವಾಡದ ಇಬ್ಬರು ರೈತರು ಮಾತ್ರ ಈ ಕಲ್ಲಂಗಡಿ ಬೆಳೆದಿದ್ದಾರೆ. ಅವರು ಇತರ ರೈತರಿಗೆ, ಗ್ರಾಹಕರಿಗೆ ಹಳದಿ ಕಲ್ಲಂಗಡಿ ಪರಿಚಯಿಸಲು ನಗರದ ತೋಟಗಾರಿಕೆ ಇಲಾಖೆ ಹಾಗೂ ಹಳೇ ಬಸ್​ ನಿಲ್ದಾಣ ಆವರಣದಲ್ಲಿ ತಾತ್ಕಾಲಿಕ ಮಳಿಗೆ ತೆರೆದು ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಲಾಗುವುದು. ಹಳದಿ ಕಲ್ಲಂಗಡಿ ಬೆಳೆಯಲು ಅನೇಕ ರೈತರು ಆಸಕ್ತಿ ವ್ಯಕ್ತಪಡಿಸಿ ಬೇಡಿಕೆ ಸಲ್ಲಿಸುತ್ತಿದ್ದಾರೆ. ಅವರಿಗೆ ಬೆಳೆ ಕ್ಷೇತ್ರೋತ್ಸವ ಮೂಲಕ ತಜ್ಞರಿಂದ ಅಗತ್ಯ ಮಾಹಿತಿ, ತರಬೇತಿ ನೀಡಿ, ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿ, ಸಹಾಯಧನ ಮತ್ತು ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ರೈತರಾದ ಗುಡ್ಡಪ್ಪ ಮೈಲಾರ, ಕಲ್ಲನಗೌಡ ಪಾಟೀಲ ಮಾತನಾಡಿದರು. ನಾಗವ್ವ ಮಾಳಗಿಮನಿ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ ಡಿ.ಎಚ್​.ಹೂಗಾರ, ಜಿಪಂ ಮಾಜಿ ಅಧ್ಯಕ್ಷ ನಿಜನಗೌಡ ಪಾಟೀಲ, ತಾಲೂಕು ನರೇಗಾ ಸಹಾಯಕ ನಿರ್ದೇಶಕ ಚಂದ್ರು ಪೂಜಾರ, ಸಂಗವ್ವ ಹೂಗಾರ, ಕೃಷಿ ವಿವಿ ಸಹಾಯಕ ಪ್ರಾಧ್ಯಾಪಕಿ ಡಾ. ನಮಿತಾ ರಾವುತ್​, ತಮ್ಮಣ್ಣ ಗುಂಡಗೋವಿ, ಇತರರು ಇದ್ದರು.

ಕೆ.ಸಿ. ಭದ್ರಣ್ಣವರ ಸ್ವಾಗತಿಸಿದರು. ಮಹೇಶ ಪಟ್ಟಣಶೆಟ್ಟಿ ನಿರೂಪಿಸಿದರು. ಇಮ್ತಿಯಾಜ್​ ಚಂಗಾಪುರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net