

ಬೆಂಗಳೂರು ಶಾಲಾ ಹಂತದಲ್ಲಿ ಪಾಲಕರು ಮತ್ತು ಶಿಕ್ಷಕರು ತಮ್ಮ ಮನಸ್ಥಿತಿ ಬದಲಾಯಿಸಿಕೊಂಡು ಶಿಕ್ಷಣ ನೀಡದಿದ್ದರೆ, ಲೈಂಗಿಕ ಅಲ್ಪಸಂಖ್ಯಾತರು ಫುಟ್‌ಪಾತ್‌ನಲ್ಲಿ ಭಿಕ್ಷೆ ಬೇಡುವ ಪರಿಸ್ಥಿತಿ ಬದಲಾಗದು ಎಂದು ಅಲ್ಪಸಂಖ್ಯಾತರ ಪರ ಹೋರಾಟಗಾರ್ತಿ ಅಕೈ ಪದ್ಮಶಾಲಿ ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಮತ್ತು ಇಂಗ್ಲಿಷ್ ವಿಭಾಗ ಶನಿವಾರ ಆಯೋಜಿಸಿದ್ದ ಲೈಂಗಿಕ ಅಲ್ಪಸಂಖ್ಯಾತರ ಸವಾಲುಗಳು ಉಪನ್ಯಾಸ ಮಾಲಿಕೆಯಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಗಂಡು, ಹೆಣ್ಣನ್ನು ಸಮಾನವಾಗಿ ಕಂಡರೂ ಲೈಂಗಿಕ ಅಲ್ಪಸಂಖ್ಯಾತರನ್ನು ಸಮಾನವಾಗಿ ಕಾಣುತ್ತಿಲ್ಲ. ಸಂಖ್ಯೆ ಕಡಿಮೆ ಇರುವುದರಿಂದ ನಮ್ಮ ಕಷ್ಟವನ್ನು ಆಲಿಸುವ ಪ್ರಯತ್ನಕ್ಕೆ ಯಾರೂ ಮುಂದಾಗುತ್ತಿಲ್ಲ.ಸಮಾಜ ಮತ್ತು ವ್ಯವಸ್ಥೆಯು ನಮಗೆ ಗೌರವ ಕೊಡುವುದಿರಲಿ ಕನಿಷ್ಠ ಅಸ್ತಿತ್ವವನ್ನು ಒಪ್ಪಿಕೊಳ್ಳುವುದಿಲ್ಲ. ಅಲ್ಪಸಂಖ್ಯಾತ ರಕ್ಷಣಾ ಕಾಯ್ದೆ ಅಸ್ಥಿತ್ವದಲ್ಲಿದ್ದರೂ ಅದರಿಂದ ಉಪಯೋಗಕ್ಕಿಂತ ಸಮಸ್ಯೆಗಳೇ ಹೆಚ್ಚುತ್ತಿರುವುದರಿಂದ ಸಬಲೀಕರಣವಾಗುತ್ತಿಲ್ಲ ಎಂದು ಹೇಳಿದರು.
ಸುಮಾರು 2 ಗಂಟೆಗಳ ಕಾಲ ನಡೆದ ಉಪನ್ಯಾಸ ಮಾಲಿಕೆಯಲ್ಲಿ ಒಂದೆಡೆ ಸಂಸ್ಥೆಯ ಲೈಂಗಿಕ ಅಲ್ಪಸಂಖ್ಯಾತ ಕಾರ್ಯಕರ್ತರು ಭಾಗಿಯಾಗಿ ತಮ್ಮ ಸವಾಲು, ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಸ್ಥಿತಿಗತಿ, ನ್ಯೂನತೆಗಳು, ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿದರು.
ಈ ವೇಳೆ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ವೈ. ಸುರೇಂದ್ರ ಕುಮಾರ್, ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಪ್ರೊ. ಗೀತಾ ಉಪಸ್ಥಿತರಿದ್ದರು.