ಶಿಕ್ಷಣ, ಸೌಲಭ್ಯ ಕಲ್ಪಿಸಿದರೆ ಗ್ರಾಮೀಣರಿಂದ ಸಾಧನೆ

Published on

ಮದ್ದೂರು : ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸೂಕ್ತ ಶಿಕ್ಷಣ ಮತ್ತು ಸೌಲಭ್ಯ ಸಿಕ್ಕರೆ ಯಾರಿಗೇನು ಕಡಿಮೆ ಇಲ್ಲದಂತಹ ಸಾಧನೆ ಮಾಡುವಲ್ಲಿ ಮುಂದಿರುತ್ತಾರೆ ಎಂದು ರಾಜ್ಯ ಹೈಕೋರ್ಟ್ ನ್ಯಾಯಾಲಯದ ನ್ಯಾಯಮೂರ್ತಿ ಟಿ.ಜಿ.ಶಿವಂಶಂಕರೇಗೌಡ ಹೇಳಿದರು.

ಪಟ್ಟಣದ ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆಯ ಎಚ್.ಕೆ.ವೀರಣ್ಣಗೌಡ ಪದವಿ ಕಾಲೇಜು ವತಿಯಿಂದ ಶನಿವಾರ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ತಲಕಾಡಿನಲ್ಲಿ ಬೇಸಾಯ ಮಾಡುತ್ತಾ ಬೆಳೆದ ನಾನು ಆರಂಭದಲ್ಲಿ ವಕೀಲಿ ವೃತ್ತಿ ಆರಂಭಿಸಿದೆ. ತದನಂತರದಲ್ಲಿ ನ್ಯಾಯಾಂಗ ಇಲಾಖೆಯ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಿ ತೇರ್ಗಡೆಯಾದ ಬಳಿಕ ಲಭ್ಯವಾದ ನ್ಯಾಯಾಧೀಶ ಹುದ್ದೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ನಾನೂ ಕೂಡ ರೈತ ಕುಟುಂಬದ ವ್ಯಕ್ತಿ ಎಂದರು.

ಜನ ಸಾಮಾನ್ಯರ ನೋವನ್ನು ಸಮೀಪದಿಂದ ಬಲ್ಲೆ. ಬಡತನ ಬದುಕಿನ ದೌರ್ಬಲ್ಯವಾಗಬಾರದೆಂಬ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಗ್ರಾಮೀಣ ವಿದ್ಯಾರ್ಥಿಗಳು ವ್ಯಾಸಂಗದ ದಿನಗಳಲ್ಲೇ ಶಿಸ್ತು ಬದ್ಧತೆಗೆ ಒತ್ತು ನೀಡುವಂತೆ ಕಿವಿಮಾತು ಹೇಳಿದರು.

ಹೈಕೋರ್ಟ್ ನ್ಯಾಯಾಧೀಶ ಕೃಷ್ಣ ಎಸ್.ದೀಕ್ಷಿತ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಘಟಿಕೋತ್ಸವ ಭಾಷಣ ಮಾಡಿ, ವಿದ್ಯಾರ್ಥಿಗಳಿಗೆ ಅಂತರಂಗದಷ್ಟೆ, ಬಹಿರಂಗವೂ ಶುದ್ಧವಾಗಿರಬೇಕೆ. ಅಕ್ಷರಸ್ಥರಾಗಿ ಕೇವಲ ಪದವಿ ಪಡೆದರಷ್ಟೆ ಸಾಲದು. ವಿದ್ಯಾರ್ಥಿ ಜೀವನದಷ್ಟೇ ಖಾಸಗಿ ಜೀವನವೂ ಶುದ್ಧವಾಗಿರಬೇಕು ಎಂದು ಸಲಹೆ ನೀಡಿದರು.

ನಮ್ಮ ಬೆವರಿನ ಫಲ ತಮಗೆ ಸುಖ ತಂದುಕೊಡುತ್ತದೆ. ಅನ್ಯರ ದುಡಿಮೆಯ ಫಲ ಯಾರಿಗೂ ನೆಮ್ಮದಿ ನೀಡುವುದಿಲ್ಲ. ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳು ತಮ್ಮ ಕುಟುಂಬದಲ್ಲಿ ಕೃಷಿ, ಪಶುಪಾಲನೆ ಕಾರ್ಯಗಳಿಗೆ ಪಾಲಕರೊಡನೆ ಕೈಜೋಡಿಸಿ ತಂದೆ, ತಾಯಿಗಳ ಕಷ್ಟ ಸುಖಗಳಲ್ಲಿ ಭಾಗಿಯಾಗಬೇಕು. ಆಗ ಮಾತ್ರ ಗಳಿಸಿದ ವಿದ್ಯೆ ಪಡೆದ ಪದವಿಗೆ ಅರ್ಥ ಬರುತ್ತದೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ಸಿ.ಅಪೂರ್ವಚಂದ್ರ ಕಾರ್ಯಕ್ರಮದಲ್ಲಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಾಜರಿದ್ದ ನ್ಯಾಯಾಧೀಶರು ಸ್ವಾತಂತ್ರ್ಯ ಹೋರಾಟಗಾರ ಕೆ.ಟಿ.ಚಂದು ಅವರ 94ನೇ ಜನ್ಮದಿನದ ಅಂಗವಾಗಿ ಅವರನ್ನು ಸನ್ಮಾನಿಸಿದರು.

ಸಂಸ್ಥೆಯ ಅಧ್ಯಕ್ಷ ಸ್ವರೂಪ್‌ಚಂದ್, ಪದಾಧಿಕಾರಿಗಳಾದ ಜಿ.ಎಸ್.ಶಿವರಾಮು, ಮಲ್ಲಿಕಾರ್ಜುನ್, ಪ್ರಾಂಶುಪಾಲ ಜಿ.ಎಸ್.ಶಂಕರೇಗೌಡ, ಉಪನ್ಯಾಸಕರಾದ ಪ್ರಕಾಶ್, ಡಾ.ಎಸ್.ಪಿ.ಕಿರಣ್, ಸಂದೀಪ್, ಪ್ರದೀಪ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net