ಉತ್ತಮ ಕೆಲಸ ಮಾಡಿದರೆ ಜನಮನ್ನಣೆ, ವಿಧಾನ ಪರಿಷತ್ ಸದಸ್ಯ ಕಾಂತರಾಜು ಅಭಿಮತ, ಆಶಾಕಾರ್ಯಕರ್ತೆಯರಿಗೆ ಸನ್ಮಾನ

26 Nela Ph 01 Asha Workers Abhinandane
Published on

ನೆಲಮಂಗಲ: ಜನಪ್ರತಿನಿಧಿಗಳು ಅಧಿಕಾರಾವಧಿಯಲ್ಲಿ ಉತ್ತಮ ಕೆಲಸ ಮಾಡಿ ಜನಮನ್ನಣೆಗಳಿಸಬಹುದು ಎಂದು ವಿಧಾನ ಪರಿಷತ್ ಸದಸ್ಯ ಬಿಎಂಎಲ್ ಕಾಂತರಾಜು ತಿಳಿಸಿದರು.

ತಾಲೂಕಿನ ಬೂದಿಹಾಲ್ ಗ್ರಾಮದ ಹಳೆಯ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ನೂತನವಾಗಿ ಸ್ಥಾಪಿಸಿರುವ ಅಂಚೆಕಚೇರಿ, ಗ್ರಂಥಾಲಯ, ಯೋಗ ಕೇಂದ್ರ, ಸ್ತ್ರೀಶಕ್ತಿ ಸಂಘದ ಕಟ್ಟಡ, ಆರೋಗ್ಯ ತಪಾಸಣಾ ಕೇಂದ್ರ ಉದ್ಘಾಟನೆ ಮತ್ತು ಆಶಾಕಾರ್ಯಕರ್ತೆಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸುಸಜ್ಜಿತ ಹಾಗೂ ಬೃಹತ್ ಕಟ್ಟಡವನ್ನು ಹೊಂದಿರುವ ತಾಲೂಕಿನ ಬೂದಿಹಾಲ್ ಗ್ರಾಪಂ ದೇಶಕ್ಕೆ ಮಾದರಿಯಾಗಿದೆ. ಹೊಸ ಗ್ರಾಪಂ ಕಟ್ಟಡ ನಿರ್ಮಾಣದ ಬಳಿಕ ಹಳೆಯ ಕಟ್ಟಡವನ್ನು ಸಾರ್ವಜನಿಕರ ಉದ್ದೇಶಕ್ಕೆ ಬಳಕೆ ಮಾಡುತ್ತಿರುವುದು ಸಂತಸದ ಸಂಗತಿ ಎಂದರು.

ಅಧಿಕಾರಾವಧಿಯ ಕೊನೆಯಲ್ಲೂ ಅಭಿವೃದ್ಧಿ ಕಾರ್ಯ ಮಾಡುತ್ತಿರುವ ಗ್ರಾಪಂ ಕಾರ್ಯ ಶ್ಲಾಘನೀಯ. ದಿನನಿತ್ಯ ತಾಲೂಕಿನಾದ್ಯಂತ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಮತ್ತೆ ಲಾಕ್‌ಡೌನ್ ಮಾಡಿದರೆ ಪ್ರಕರಣಗಳಿಗೆ ಕಡಿವಾಣ ಹಾಕಬಹುದಾಗಿದೆ ಎಂದರು.

ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ಕರೊನಾದಂತಹ ತುರ್ತುಪರಿಸ್ಥಿತಿಯಲ್ಲಿ ಕುಟುಂಬವನ್ನು ಬದಿಗೊತ್ತಿ ಸಮಾಜದ ಒಳಿತಿಗಾಗಿ ದುಡಿಯುತ್ತಿರುವ ಆಶಾಕಾರ್ಯಕರ್ತೆಯರ ಸೇವೆ ಅನನ್ಯ ಎಂದು ಶ್ಲಾಸಿದರು.

ಗ್ರಾಮಪಂಚಾಯಿತಿ ವ್ಯಾಪ್ತಿಯ 9 ಮಂದಿ ಆಶಾಕಾರ್ಯಕರ್ತೆಯರನ್ನು ಗೌರವಿಸಲಾಯಿತು.

ಮಾಜಿ ಸಚಿವ ಅಂಜನಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕೆ.ನಾಗರಾಜು, ಉಪಾಧ್ಯಕ್ಷೆ ಬಿ.ವಿ.ಶೋಭಾ ನರಸಿಂಹರಾಜು, ಸದಸ್ಯ ಬಿ.ಟಿ.ಮಂಜುನಾಥ್‌ಗೌಡ, ಮಂಜುಮ್ಮ, ಡಿ.ಮಂಜುಳಾ, ಎಪಿಎಂಸಿ ನಿರ್ದೇಶಕ ವಿ.ಗೋವಿಂದರಾಜು, ಗ್ರಾಪಂ ಪಿಡಿಒ ಜಿ.ರೇಖಾ, ಕಾರ್ಯದರ್ಶಿ ಎಂ.ಹೇಮಚಂದ್ರ, ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಟಿ.ನಾಗರಾಜು, ಮುಖಂಡರಾದ ಬೂದಿಹಾಲ್‌ಕೃಷ್ಣಪ್ಪ, ಮಂಜುನಾಥ್, ಮೋಹನ್‌ಕುಮಾರ್ ಮತ್ತಿತರರು ಉಪಸ್ಥಿತರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net