ಭಕ್ತಿ ಭಾವ ಬೆಳೆದರೆ ಅಳಿಯುವುದು ಅಹಂಕಾರ

SWARNAVALLI
Published on

ಶಿರಸಿ: ಎಲ್ಲರೂ ನಿರಹಂಕಾರ ಭಾವ, ವಿನಯ ಬೆಳೆಸಿಕೊಳ್ಳಬೇಕು. ನಾನು ಭಾವ ಬಿಟ್ಟು, ನೀನು ಎಂಬ ಭಾವನೆ ಬೆಳೆಸಿಕೊಂಡರೆ ಭಕ್ತಿ ಬೆಳೆಯುತ್ತದೆ. ಭಕ್ತಿ ಭಾವ ಬೆಳೆದರೆ ಅಹಂಕಾರ ಕಳೆಯುತ್ತದೆ. ಆಗ ಮೋಕ್ಷಸಾಧ್ಯ ಎಂದು ಸೋಂದಾ ಸ್ವರ್ಣವಲ್ಲೀ ಮಠದ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು.

ಚಾತುರ್ಮಾಸ್ಯ ವ್ರತಾಚರಣೆ ಹಿನ್ನೆಲೆಯಲ್ಲಿ ತೋರಣಸಿ ಭಾಗದ ಶಿಷ್ಯ ಭಕ್ತರು ಸಲ್ಲಿಸಿದ ಗುರು ಸೇವೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು. ನಿರಹಂಕಾರ ಎಂದರೆ ವಿನಯ. ಇದು ಬಹಳ ಮುಖ್ಯವಾದುದು. ಅದು ಧರ್ಮದ ತಿರುಳು. ಅದಕ್ಕೆ ಮಹತ್ವದ ಸ್ಥಾನ ಇದೆ. ಭಕ್ತಿ ಸಾಧನೆ ಆಗುವುದೇ ಅಹಂಕಾರ ಕಡಿಮೆ ಆದಾಗ. ಸಂಪೂರ್ಣ ಅಹಂಕಾರ ತ್ಯಾಗವೇ ಮೋಕ್ಷ. ಸಾಧನೆ ಮಾರ್ಗದಲ್ಲಿ ನಿರಹಂಕಾರ ಭಾವ ಇರಬೇಕು ಎಂದರು.

ಡಿವಿಜಿ ಅವರು ಮಂಕುತಿಮ್ಮನ ಕಗ್ಗದಲ್ಲೂ ಧರ್ಮ ಎಂದರೆ ಸಹಕರಿಸುವುದೇ ಧರ್ಮ ಎಂದು ಹೇಳಲಾಗಿದೆ. ಮನೆ, ಸಮಾಜ, ರಾಷ್ಟ್ರದಲ್ಲಿ ಸಹಕಾರ ನೀಡುವುದೇ ಧರ್ಮ. ಮನೆ, ಸಮಾಜ ಹಾಗೂ ರಾಷ್ಟ್ರದ ಹಿತಕ್ಕೆ ಸಹಕಾರ ನೀಡಬೇಕು ಎಂದರು.

ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರದೇ ಸಹಕಾರ ನೀಡಬೇಕು. ಲಭಿಸಿದ ಸ್ಥಾನದ ಜವಬ್ದಾರಿಯಲ್ಲೂ ಸಮಾಜಕ್ಕೆ ಸಹಕರಿಸಿ ಕೆಲಸ ಮಾಡಬೇಕು. ಈ ಚಿಂತನೆಯಲ್ಲಿ ಎಲ್ಲರ ಹಿತ ಕಾಯುವದೇ ಧರ್ಮ. ಆ ಭಾವದಲ್ಲಿ ಸರ್ಕಾರ, ಸಮಾಜ ಕೆಲಸ ಮಾಡಬೇಕು. ನಿರಹಂಕಾರ ಭಾವದಲ್ಲಿ ಕೆಲಸ ಮಾಡಬೇಕು ಎಂದು ವಿವರಿಸಿದರು.

ಪ್ರಕೃತಿ ಕೂಡ ತನ್ನದೇ ಕೆಲಸ ಮಾಡುತ್ತಿರುತ್ತದೆ. ಹಗಲು-ರಾತ್ರಿ, ಬೇಸಿಗೆ, ಮಳೆ, ಚಳಿಗಾಲ ಬಂದು ಹೋಗುತ್ತಿರುತ್ತದೆ. ಭಗವಂತ ನಡೆಸಿಕೊಂಡ ಹೋಗುತ್ತಿದ್ದಾನೆ. ರಾಮಕೃಷ್ಣ ಪರಮಹಂಸರು ‘ನೀನು ಸೂತ್ರಧಾರಿ, ನಾನು ಸೂತ್ರದ ಗೊಂಬೆ’ ಎಂದು ಹೇಳುತ್ತಾರೆ. ಇಂಥ ಭಾವನೆಯಲ್ಲಿ ನೋಡಿದಾಗ ನಿರಹಂಕಾರ ಭಾವ ಬರುತ್ತದೆ ಎಂದರು.

ಅಹಂಕಾರ ಕಡಿಮೆಯಾದಷ್ಟೂ ನೆಮ್ಮದಿ. ಅಹಂಕಾರ ಹೆಚ್ಚಾದರೆ ಅನಾರೋಗ್ಯದ ಜತೆಗೆ ಕೌಟುಂಬಿಕ ಸಮಸ್ಯೆ, ಕಲಹಗಳೂ ಉಂಟಾಗುತ್ತವೆ. ಸಾಮಾಜಿಕ ಸಮಸ್ಯೆಗಳೂ ಹೆಚ್ಚಾಗುತ್ತವೆ. ತೀವ್ರತೆ, ಘರ್ಷಣೆ ಆಗುತ್ತದೆ. ಆರೋಗ್ಯ, ಸಾಮರಸ್ಯ, ಮುಖ್ಯವಾಗಿ ಧರ್ಮ ಸಂರಕ್ಷಣೆಗೆ ನಿರಂಹಕಾರ ಭಾವ ಬೆಳೆಸಿಕೊಳ್ಳಬೇಕು. ಅಹಂಕಾರ ಭಾವ ಕಡಿಮೆಯಾಗಲು ನೀನು, ನಿನ್ನದು ಎಂದ ಭಾವನೆ ಬೆಳೆಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಗುರುಪಾದ .ರಾ .ಹೆಗಡೆ ಹಲಸಿನಳ್ಳಿ, ಗಿರೀಶ ಭಟ್ಟ ಕರಸುಳ್ಳಿ, ಆರ್.ಎಸ್. ಹೆಗಡೆ ಬೈರುಂಬೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net