ಸಿದ್ದರಾಮಯ್ಯ ನನ್ನೆದುರು ಗೋ ಮಾಂಸ ತಿಂದು ತೋರಿಸಲಿ: ಸಚಿವರ ಸವಾಲ್!

prabhu chavhan
Published on

ಮಡಿಕೇರಿ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗೋಮಾಂಸ ತಿನ್ನುತ್ತೇನೆ ಎನ್ನುತ್ತಾರೆ. ಅವರು ನನ್ನ ಎದುರು ಗೋಮಾಂಸ ಸೇವನೆ ಮಾಡಿ ತೋರಿಸಲಿ ಎಂದು ಪಶುಸಂಗೋಪನೆ ಸಚಿವ ಸಚಿವ ಪ್ರಭು ಚವಾಣ್ ಸವಾಲು ಹಾಕಿದ್ದಾರೆ.

‘‘ವಿರೋಧ ಮಾಡುವುದಕ್ಕೆ ಅವರು ಹೆಸರುವಾಸಿ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದೇವೆ. ಅದನ್ನು ಅನುಷ್ಠಾನ ಮಾಡಿಯೇ ಮಾಡುತ್ತೇವೆ. ಆದರೆ, ಸಿದ್ದರಾಮಯ್ಯ ಜನರಿಗೆ ದಾರಿ ತಪ್ಪಿಸಬಾರದು. ಸಿದ್ದರಾಮಯ್ಯ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಹಬ್ಬಗಳಲ್ಲಿ ಗೋ ಪೂಜೆ ಮಾಡುವುದಿಲ್ಲವೇ?’’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ರಾಜ್ಯದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ತಂದಿದ್ದು ದಂಡ ಹಾಗೂ ಶಿಕ್ಷೆ ಪ್ರಮಾಣ ಹೆಚ್ಚಿಸಲಾಗಿದೆ. ರಾಜ್ಯದಲ್ಲಿ ಕಾಯ್ದೆ ಜಾರಿಯಲ್ಲಿತ್ತು. ನಾವು ತಿದ್ದುಪಡಿ ಮಾಡಿದ್ದು, ಕೆಲವು ಬದಲಾವಣೆ ತಂದಿದ್ದೇವೆ. ಗೋವು ಹತ್ಯೆ ಮಾಡಿದವರಿಗೆ ಬೇಗ ಶಿಕ್ಷೆ ಆಗಬೇಕೆಂದು ವಿಶೇಷ ನ್ಯಾಯಾಲಯ ಸ್ಥಾಪನೆಗೂ ಅವಕಾಶ ನೀಡಲಾಗಿದೆ. ರಾಜ್ಯದಲ್ಲಿ 3 ಕೋಟಿಯಷ್ಟು ಜಾನುವಾರುಗಳಿವೆ. ರೈತರು ಗಂಡು ಕರುಗಳನ್ನು ಮೂರು ತಿಂಗಳು ಸಾಕಿದ ಮೇಲೆ ಗೋಶಾಲೆಗೆ ತಂದುಬಿಡಬಹುದು. ಅದಕ್ಕೂ ಮೊದಲು ಬಿಟ್ಟರೆ ಕಷ್ಟ ಎಂದು ಹೇಳಿದರು.

ಕಾಯ್ದೆ ಜಾರಿಯಾಗಿದ್ದು, ಗೋಮಾಳ ರಕ್ಷಣೆ ಮಾಡಲು ಸೂಚನೆ ನೀಡಲಾಗಿದೆ. ಖಾಸಗಿ ಸಂಸ್ಥೆಯ 198 ಗೋಶಾಲೆಗಳು ರಾಜ್ಯದಲ್ಲಿದ್ದು, ಅವುಗಳಿಗೆ ಅನುದಾನ ನೀಡಲಾಗುವುದು. ಕಾಯ್ದೆ ಬಗ್ಗೆ ರಾಜ್ಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಸಹ ನಡೆಯುತ್ತಿದೆ. ಕಾಯ್ದೆ ಜಾರಿಯಾದ ಮೇಲೆ ರಾಜ್ಯದಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ಉತ್ತರ ಪ್ರದೇಶದಲ್ಲಿ ಮುಜರಾಯಿ ಇಲಾಖೆ, ಮಠಗಳು ಹಾಗೂ ವ್ಯಾಪಾರಸ್ಥರು ಗೋಶಾಲೆಗೆ ಸಾಕಷ್ಟು ನೆರವು ನೀಡುತ್ತಿದ್ದಾರೆ. ರಾಜ್ಯದಲ್ಲಿಯೂ ನೆರವು ನೀಡಬೇಕು. ಸದ್ಯಕ್ಕೆ ಸರ್ಕಾರದಿಂದ ಗೋಶಾಲೆ ಸ್ಥಾಪಿಸುವ ಕುರಿತು ಇನ್ನೂ ನಿರ್ಧಾರ ಮಾಡಿಲ್ಲ. ಅದರ ಬಗ್ಗೆಯೂ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಗಡಿಭಾಗದಲ್ಲಿ ಗೋವುಗಳು ಅಕ್ರಮವಾಗಿ ಸಾಗಣೆ ಆಗದಂತೆ ತಡೆಯಲು ಪೊಲೀಸರು ಹಾಗೂ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net