ಬೆಳೆ ಹಾನಿ ವರದಿ ನೀಡದಿದ್ದರೆ ಪ್ರತಿಭಟನೆ

HNL BELE HANI
Published on

ಹಾನಗಲ್ಲ: ನಿರಂತರ ಮಳೆಯಿಂದಾಗಿ ಆಗಿರುವ ಬೆಳೆ ಹಾನಿ ಬಗ್ಗೆ ನಿರ್ಲಕ್ಷ್ಯ ತೋರಿರುವ ತಹಸೀಲ್ದಾರ್ ಎಸ್. ರೇಣುಕಾ ಅವರು ನಾಲ್ಕಾರು ದಿನಗಳಲ್ಲಿ ಹಾನಿ ವರದಿ ನೀಡದಿದ್ದರೆ ತಹಸೀಲ್ದಾರ್ ಕಚೇರಿಗೆ ಘೕರಾವ್ ಹಾಕಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ರೈತ ಸಂಘದ ತಾಲೂಕಾಧ್ಯಕ್ಷ ಮರಿಗೌಡ ಪಾಟೀಲ ಎಚ್ಚರಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ 23 ಇಲಾಖೆಗಳಲ್ಲಿ ರೈತರ ಸಮಸ್ಯೆಗಳು ನನೆಗುದಿಗೆ ಬಿದ್ದಿವೆ. ಈ ಬಗ್ಗೆ ಕಿಂಚಿತ್ತೂ ಲಕ್ಷ್ಯವಹಿಸದ ತಾಲೂಕು ತಹಸೀಲ್ದಾರರು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂಬುದು ಸಾಬೀತಾಗಿದೆ. ಈಗಾಗಲೇ ಬ್ಯಾಡಗಿ, ಹಿರೇಕೆರೂರು ತಾಲೂಕುಗಳಲ್ಲಿ ಬೆಳೆ ಹಾನಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಾಗಿದೆ. ಆದರೆ, ಹಾನಗಲ್ಲ ತಾಲೂಕಿನಲ್ಲಿ ಪ್ರತಿಭಟನೆ ನಡೆಸಿ ಎಚ್ಚರಿಸಿದರೂ ಬೆಳೆ ಹಾನಿ ಪರಿಶೀಲನೆ ನಡೆದಿಲ್ಲ ಎಂದರು.

ವಾಡಿಕೆಗಿಂತ ಮಳೆ ಕಡಿಮೆಯಾಗಿದೆ. ಆದರೆ, ನಿರಂತರ ಮಳೆ ಕಾರಣದಿಂದಾಗಿ ಬೆಳೆಗಳು ಸಂಪೂರ್ಣವಾಗಿ ಹಾಳಾಗಿವೆ. ಗೋವಿನ ಜೋಳ, ಸೋಯಾ ಅವರೆ, ಶೇಂಗಾ ಸೇರಿದಂತೆ ಎಲ್ಲ ಬೆಳೆಗಳು ಹಳದಿಯಾಗಿ, ಬೆಳೆ ಕುಂಠಿತವಾಗಿ ಪೈರು ಅಕ್ಷರಶಃ ಸಿಗದ ಸ್ಥಿತಿಯಲ್ಲಿವೆ. ಮಳೆ ಆಧಾರದ ಮೇಲೆ ಬೆಳೆ ಹಾನಿ ಹೇಳಲು ಸಾಧ್ಯವಿಲ್ಲ. ವಾಸ್ತವದ ವರದಿ ಬೇಕಾಗಿದೆ ಎಂದರು.

ಈಗಾಗಲೇ 7 ಸಾವಿರಕ್ಕೂ ಅಧಿಕ ರೈತರ ಅರ್ಜಿಗಳು ಬೆಳೆ ಹಾನಿ ಆದ ಬಗ್ಗೆ ಕೃಷಿ ಇಲಾಖೆಗೆ ಸಲ್ಲಿಕೆಯಾಗಿವೆ. ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಬೇಕಾಗಿತ್ತು. ವಿಳಂಬದ ಕಾರಣ ತಿಳಿಯುತ್ತಿಲ್ಲ. ಇದೇ ತಿಂಗಳು 4ನೇ ತಾರೀಕಿಗೆ ನಡೆಸಿದ ರೈತರ ಸಭೆಗೆ ಕೇವಲ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳೊಂದಿಗೆ ರ್ಚಚಿಸಲಾಯಿತು. ಚರ್ಚೆ ಆದ ವಿಷಯಗಳ ಬಗ್ಗೆ ಕ್ರಮ ಜರುಗಿಸುವಲ್ಲಿ ವಿಳಂಬವಾಗಿದೆ. ಉಳಿದ 11 ಇಲಾಖೆಗಳ ರೈತರ ಸಮಸ್ಯೆಗಳು ಹಾಗೇ ಉಳಿದಿವೆ. ಇದಕ್ಕೆ ತಾಲೂಕು ತಹಸೀಲ್ದಾರರಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದರು. ತಾಲೂಕಾಡಳಿತ ನಮ್ಮ ಸಹನೆ ಪರೀಕ್ಷಿಸುವುದು ಬೇಡ. ರೈತರ ಬೇಡಿಕೆ ಸೌಲಭ್ಯಗಳ ಬಗೆಗೆ ಹೀಗೆ ನಿರ್ಲಕ್ಷ್ಯ ಮುಂದುವರಿದರೆ ತಹಸೀಲ್ದಾರ್ ರೇಣುಕಮ್ಮ ಅವರ ವರ್ಗಾವಣೆಗೆ ಒತ್ತಾಯಿಸಬೇಕಾಗುತ್ತದೆ. ತಹಸೀಲ್ದಾರ್ ಕಚೇರಿ ಎದುರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ತಾಲೂಕು ಘಟಕದ ಪದಾಧಿಕಾರಿಗಳಾದ ಮಹೇಶ ವಿರೂಪಣ್ಣನವರ, ಸೋಮಣ್ಣ ಜಡೆಗೊಂಡರ, ರುದ್ರಪ್ಪ ಹಣ್ಣಿ, ಮಲ್ಲೇಶಪ್ಪ ಪರಪ್ಪನವರ, ಮಹಾಲಿಂಗಪ್ಪ ಅಕ್ಕಿವಳ್ಳಿ, ರಾಜೀವ ದಾನಪ್ಪನವರ, ವಾಸುದೇವ ಕಮಾಟಿ, ಎಂ.ಎಂ. ಬಡಗಿ, ಶ್ರೀಧರ ಮಲಗುಂದ, ಅಜ್ಜನಗೌಡ ಕರೆಗೌಡ್ರ, ಶಿವಕುಮಾರ ಹಣ್ಣಿ, ಧರಣೇಂದ್ರಪ್ಪ ಹಾವನೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net