ಕೆನೆಪದರ ಜಾರಿಗೆ ತಂದರೆ ಮೀಸಲಾತಿ ಪರಿಶಿಷ್ಟ ಜಾತಿಯ ಜನರ ಕೈ ತಪ್ಪಲಿದೆ

mysore
Published on

ಮೈಸೂರು: ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿಯ ಜನರು ಉನ್ನತ ವ್ಯಾಸಂಗ ಮಾಡಲಾರದೆ ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ ಎಂದು ಕರ್ನಾಟಕ ಬುದ್ಧದಮ್ಮ ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಮಹದೇವಪ್ಪ ಹೇಳಿದರು.


ವಿಜಯನಗರ 1ನೇ ಹಂತದ ಡಿ.ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ಬುದ್ಧವಿಹಾರದಲ್ಲಿ ಕರ್ನಾಟಕ ಬುದ್ಧದಮ್ಮ ಸಮಿತಿ ಇತ್ತೀಚಿಗೆ ಆಯೋಜಿಸಿದ್ದ ‘ಒಳ ಮೀಸಲಾತಿ-ಕೆನೆಪದರ’ ಕುರಿತು ಮುಕ್ತ ಸಂವಾದದಲ್ಲಿ ಮಾತನಾಡಿದರು.


ವೈದ್ಯಕೀಯ, ಇಂಜಿನಿಯರಿಂಗ್, ಸ್ನಾತಕೋತರ ಪದವಿ ಹೀಗೆ ವಿವಿಧ ಕೋರ್ಸ್‌ಗಳಲ್ಲಿ ದುಬಾರಿ ಶುಲ್ಕ ಇರುವುದರಿಂದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲಾರದ ಸ್ಥಿತಿಯಲ್ಲಿದ್ದಾರೆ. ಅಂತಹವರಿಗೆ ನೀಡಲಾದ ಮೀಸಲಾತಿಯ ಸೀಟ್‌ಗಳು ಉಳ್ಳವರ ಪಾಲಾಗುವ ಅಪಾಯವಿದೆ. ಈ ಸಂದರ್ಭದಲ್ಲಿ ಕೆನೆಪದರ ಜಾರಿಗೆ ತಂದರೆ ಮೀಸಲಾತಿ ಸಂಪೂರ್ಣವಾಗಿ ಪರಿಶಿಷ್ಟ ಜಾತಿಯ ಜನರ ಕೈ ತಪ್ಪಲಿದೆ ಎಂದು ಆತಂಕ ವ್ಯಕ್ತಪಡಿಸಿದರು.


ಪರಿಶಿಷ್ಟ ಜಾತಿಯ ಜನರಿಗೆ ನೀಡಲಾಗಿರುವ ಮೀಸಲಾತಿಯು ಸಾಮಾಜಿಕ ಸಮಾನತೆಗಾಗಿ. ಯಾರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೋ ಅಂತಹವರಿಗೆ ಸಂವಿಧಾನದಲ್ಲಿ ಮೀಸಲಾತಿ ನೀಡಿರುವುದು. ಇದರಲ್ಲಿ ಆರ್ಥಿಕ ಅಂಶಗಳನ್ನು ಪರಿಗಣಿಸಬಾರದು ಎಂದರು.


ಎಸ್‌ಸಿ-ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಡಿ.ಚಂದ್ರಶೇಖರಯ್ಯ ಮಾತನಾಡಿ, ಪರಿಶಿಷ್ಟ ಜಾತಿಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನಿಲ್ಲಿಸಲಾಗಿದೆ. ಪಿಯುಸಿ ವಿದ್ಯಾರ್ಥಿಗಳಿಗೆ ಶೇ.75ರಷ್ಟು ಅಂಕ ಪರಿಗಣಿಸಿರುವುದು ಸರಿಯಲ್ಲ. ಇದರಿಂದ ತಳ ಸಮುದಾಯದ ಮಕ್ಕಳಿಗೆ ಅನ್ಯಾಯವಾಗಿದೆ. ಇದರಿಂದ ದಲಿತ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಸಮುದಾಯದ ಶಾಸಕರು, ಸಚಿವರು, ಮಂತ್ರಿಗಳು ಧ್ವನಿ ಎತ್ತಬೇಕಿದೆ ಎಂದರು.


ಮುಖಂಡರಾದ ಬಸವರಾಜು, ಹರಿಹರ ಆನಂದಸ್ವಾಮಿ, ಚೋರನಹಳ್ಳಿ ಶಿವಣ್ಣ, ಡಾ.ಎಸ್.ಪ್ರೇಮ್‌ಕುಮಾರ್, ಅಹಿಂದ ಜವರಪ್ಪ, ಡಾ.ಎಂ.ರುದ್ರಯ್ಯ, ಲಕ್ಷ್ಮಣ ಹೊಸಕೋಟೆ, ಸಣ್ಣಯ್ಯ ಲಕ್ಕೂರು, ರಾಜು ಹಂಪಾಪುರ, ಹೊರಳವಾಡಿ ನಂಜುಂಡಸ್ವಾಮಿ, ಕೆ.ಎಂ.ಪುಟ್ಟು, ನಿಸರ್ಗಾ ಸಿದ್ದರಾಜು, ಮಾ.ನಾಗಯ್ಯ, ಸಿ.ಹರಕುಮಾರ್, ರಾಘವೇಂದ್ರ ಅಪುರಾ, ಕುಮಾರ ಮೌರ್ಯ, ಮಹೇಶ್ ಇರಸವಾಡಿ ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net