

ಹೊಳಲ್ಕೆರೆ: ಹೋಟೆಲ್‌ಗಳಲ್ಲಿ ಸ್ವಚ್ಛತೆ ಜತೆಗೆ ಶುದ್ಧ ನೀರು ವಿತರಣೆಗೆ ಆದ್ಯತೆ ನೀಡದಿದ್ದರೆ ಪರಾನಗಿ ರದ್ದು ಜತೆಗೆ ದಂಡ ವಿಧಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಎ.ವಾಸಿಂ ಎಚ್ಚರಿಕೆ ನೀಡಿದರು.
ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸರ್ವ ಸದಸ್ಯರು ಹಾಗೂ ಹೋಟೆಲ್ ಮಾಲೀಕರ ಸಭೆಯಲ್ಲಿ ಮಾತನಾಡಿದರು.ಫಾಸ್ಟ್ ಫುಡ್ ಅಂಗಡಿ, ಹೋಟೆಲ್ ಮಾಲೀಕರು ಹಾಗೂ ಬೀದಿಬದಿ ವ್ಯಾಪಾರಸ್ಥರು ಪುರಸಭೆ ನಿಯಮಗಳ ಪ್ರಕಾರ ಆಹಾರ ಹಾಗೂ ಕುಡಿಯುವ ನೀರಿನ ವಿಚಾರದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದರು.
ಕವಾಡಿಗರಹಟ್ಟಿ ದುರಂತದ ಬಳಿಕ ಪೌರಾಡಳಿತ ನಿರ್ದೇಶನಾಲಯ ಹಾಗೂ ಜಿಲ್ಲಾಡಳಿತ ಸೂಚನೆಯಂತೆ ಪಟ್ಟಣದಲ್ಲಿ ಮುಂಜಾಗ್ರತ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಹೋಟೆಲ್‌ಗಳ ಮಾಲೀಕರು ಮತ್ತು ವ್ಯಾಪಾರಸ್ಥರು ಸಹಕರಿಸಬೇಕು ಎಂದು ಹೇಳಿದರು.
ಹಸಿ ಮತ್ತು ಒಣಕಸ ವಿಂಗಡಿಸಿ ಪುರಸಭೆ ವಾಹನಕ್ಕೆ ನೀಡುವುದು, ಆಹಾರದ ದರ ಪಟ್ಟಿ, ಪ್ಲಾಸ್ಟಿಕ್ ಬಳಕೆ ನಿಷೇಧಿಸಿರುವ ಬಗ್ಗೆ ಫಲಕಗಳನ್ನು ಅಳವಡಿಸಬೇಕು. ವಾಹನ ಸಂಚಾರಕ್ಕೆ ಸಮಸ್ಯೆ ಆಗದ ರೀತಿ ವ್ಯಾಪಾರ ನಡೆಸಬೇಕು. ನೀರಿನ ಟ್ಯಾಂಕರ್‌ಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನಿರ್ಲಕ್ಷೃ ವಹಿಸಿದರೆ ಪರವಾನಗಿ ರದ್ದು ಜತೆಗೆ ದಂಡ ವಿಧಿಸುವುದು ಅನಿವಾರ್ಯ ಎಂದರು.
ಪುರಸಭೆ ಸದಸ್ಯರಾದ ಆರ್.ಎ.ಅಶೋಕ್, ಕೆ.ಸಿ.ರಮೇಶ್, ಸೈಯದ್ ಸಜೀಲ್, ಪಿ.ಎಚ್.ಮುರುಗೇಶ್, ವಿಜಯಸಿಂಹ ಖಾಟ್ರೋತ್, ಡಿ.ಎಸ್.ವಿಜಯ, ಸೈಯದ್ ಮನ್ಸೂರ್, ಸುಧಾ ಬಸವರಾಜ್, ವಕೀಲರಾದ ಎಸ್.ವೇದಮೂರ್ತಿ ಇತರರಿದ್ದರು.