

ಬೆಂಗಳೂರು: ಪಾಲಕರೇ.. ಇನ್ನುಮುಂದೆ ನಿಮ್ಮ ಮಕ್ಕಳಿಗೆ ದ್ವಿಚಕ್ರ ವಾಹನ ಕೊಡುವಾಗ ಹುಷಾರಾಗಿರಿ. ಒಂದುವೇಳೆ ಮಕ್ಕಳು ವ್ಹೀಲಿಂಗ್ ಮಾಡಿದರೆ ಸಂಚಾರ ಪೊಲೀಸರು ತಂದೆ-ತಾಯಿಯನ್ನು ಕೌನ್ಸೆಲಿಂಗ್ಗೆ ಒಳಪಡಿಸುತ್ತಾರೆ. ಮಾತ್ರವಲ್ಲ, ಮಕ್ಕಳು ದಂಡ ಅಥವಾ ಜೈಲುಶಿಕ್ಷೆಗೆ ಗುರಿ ಆಗಬೇಕಾದ ಸಾಧ್ಯತೆಯೂ ಇರುತ್ತದೆ.
ವ್ಹೀಲಿಂಗ್ ನಡೆಸುವವರ ವಿರುದ್ಧದ ವಿಶೇಷ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ ಈ ವಿಷಯ ತಿಳಿಸಿದ್ದಾರೆ. ವ್ಹೀಲಿಂಗ್ ಪ್ರಕರಣಗಳಲ್ಲಿ 18-20ವರ್ಷ ಒಳಗಿನ ಯುವಕರೇ ಹೆಚ್ಚು. ಒಂದು ವೇಳೆ ಅಪ್ರಾಪ್ತ ವಯಸ್ಸಿನ ಯುವಕರು ವ್ಹೀಲಿಂಗ್ ಮಾಡುವಾಗ ಸಿಕ್ಕಿಹಾಕಿಕೊಂಡರೆ ಅಂಥವರ ತಂದೆ-ತಾಯಿಯ ಮೇಲೆ ಕ್ರಮಕೈಗೊಳ್ಳುತ್ತೇವೆ.
ತಂದೆ-ತಾಯಿಗೆ ಮೊದಲಿಗೆ ಒಂದು ದಿನದ ಕೌನ್ಸೆಲಿಂಗ್ ಮಾಡಿಸುತ್ತೇವೆ. ಆ ಮೂಲಕ ಮಕ್ಕಳಿಗೆ ಯಾವ ವಯಸ್ಸಿಗೆ ವಾಹನ ನೀಡಬೇಕು ಎಂಬುದನ್ನು ತಿಳಿಸುತ್ತೇವೆ. ಅಪ್ರಾಪ್ತ ವಯಸ್ಕರಲ್ಲದವರ ವಿಚಾರದಲ್ಲೂ ಕೌನ್ಸೆಲಿಂಗ್ಗೆ ಒಳಪಡಿಸುತ್ತೇವೆ. ಅಪಾಯಕಾರಿ ಚಾಲನೆ ಮಾಡುವವರ ವಿರುದ್ದ 107 ಕಾಯ್ದೆ ಪ್ರಕಾರ ಕ್ರಮಜರುಗಿಸಲು ಅವಕಾಶ ಇರುತ್ತದೆ. ಅಲ್ಲದೆ 5ರಿಂದ 10 ಲಕ್ಷ ರೂ. ಬಾಂಡ್ ಅಥವಾ ಜೈಲಿಗೆ ಕಳುಹಿಸಲು ಕೂಡ ಅವಕಾಶ ಇರುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.