

ಗಂಡಸಿ : ಶಿಕ್ಷಕ ವಿದ್ಯೆ ಎಂಬ ಸಂಸ್ಕಾರವನ್ನು ಮಕ್ಕಳಿಗೆ ಕೊಟ್ಟಾಗ ಮಾತ್ರ ಆತ ಸಮಾಜದಲ್ಲಿ ಸುಸಂಸ್ಕೃತನಾಗಲು ಸಾಧ್ಯವಾಗುತ್ತದೆ ಎಂದು ನೊಣವಿನಕೆರೆ ಶ್ರೀ ಕಾಡ ಸಿದ್ದೇಶ್ವರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ತಿಳಿಸಿದರು.
ಚಿಂದೆನಹಳ್ಳಿ ಗೇಟ್ ಕಾಡಸಿದ್ದೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪಾಠಶಾಲೆಯಲ್ಲಿ ಗುರುವಿಗೆ ಮನೆಯಲ್ಲಿ ಗುರು ಹಿರಿಯರಿಗೆ ಗೌರವಿಸುವ ಸಂಸ್ಕಾರದ ಜತೆಗೆ ವಿದ್ಯಾರ್ಥಿಗಳಿಗೆ ಓದುವ ಸಂಸ್ಕಾರವನ್ನು ಶಿಕ್ಷಕರು ಕಲಿಸಬೇಕು ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ಮಾತನಾಡಿ, ಸರ್ಕಾರಿ ಶಾಲೆಗಳು, ಸರ್ಕಾರಿ ಆಸ್ಪತ್ರೆಗಳು ಉಳಿಸಿ ಬೆಳೆಸಿದಾಗ ಮಾತ್ರ ಬಡ ಕುಟುಂಬಗಳಿಗೆ ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಸುಲಭವಾಗಿ ದೊರಕಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಹಳೆಯ ವಿದ್ಯಾರ್ಥಿಗಳು ಸಂಘಗಳನ್ನು ರಚಿಸಿಕೊಂಡು ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಸಹಕರಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್, ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಶಾಂತ್, ಸಂಸ್ಥೆಯ ಉಪಾಧ್ಯಕ್ಷ ಗಂಡಸಿ ಮಂಜುನಾಥ್, ಸಮಾಜ ಸೇವಕ ಗುಡ್ಡೇನಹಳ್ಳಿ ಮಹಾಲಿಂಗಪ್ಪ, ಮಲ್ಲಾಪುರ ಅಣ್ಣೇಗೌಡ, ಮಂಗಳಾಪುರ ರಾಜು, ಪ್ರಸನ್ನ ಕುಮಾರ್, ಕುಮಾರ್ ಮತ್ತು ಸ್ಥಳೀಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರುಗಳು, ಪಾಲಕರು, ಮುಖ್ಯ ಶಿಕ್ಷಕರು, ಶಿಕ್ಷಕರು, ಸಿಬ್ಬಂದಿ ಹಾಜರಿದ್ದರು.