

ಮೂಡಿಗೆರೆ: ನಗರ ಪ್ರದೇಶದಿಂದ ದೂರವಿದ್ದು , ಹಳ್ಳಿಯಲ್ಲಿ ಜೀವಿಸಿರಿ ಎಂದು ಜಗತ್ತಿನ ಜನರಿಗೆ ಕರೆ ನೀಡಿದ್ದ ಸಂತ ಸೇವಾಲಾಲ್ ಅವರ ಜೀವನ ಚರಿತ್ರೆಯ ಆಳವನ್ನು ಹುಡುಕಲು ಸಾಧ್ಯವಿಲ್ಲ ಎಂದು ತಹಸೀಲ್ದಾರ್ ರಾಜಶೇಖರ್ ಮೂರ್ತಿ ಹೇಳಿದರು.
ಸಂತ ಸೇವಾಲಾಲ್ ಜಯಂತಿ ಆಚರಣೆ ಸಮಿತಿಯಿಂದ ತಾಪಂ ಪಂಡಿತ್ ದೀನದಯಾಶ್ ಉಪಾಧ್ಯಾಯ ಸಭಾಂಗಣದಲ್ಲಿ ನಡೆದ ಸಂತ ಸೇವಾಲಾಲ್ ಅವರ 286ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿ 1,008 ಪ್ರಮುಖ ಜಾತಿಗಳಿವೆ. 6,685 ಉಪಜಾತಿಗಳಿವೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಜಾತಿ ನಾಶ ಮಾಡುವಂತೆ ಸಮಾಜಕ್ಕೆ ಸಂದೇಶ ನೀಡಿದ್ದಾರೆ. ಆದರೆ ಇಲ್ಲಿ ಜಾತಿಗಳ ಸಂಖ್ಯೆ ಹೆಚ್ಚಾಗುತ್ತಿವೆ. ಪ.ಜಾತಿಗೆ 101, ಪ.ಪಂಗಡಕ್ಕೆ 50 ಉಪಜಾತಿಗಳು ಸೇರ್ಪಡೆಯಾಗುತ್ತದೆ. ಉಪಜಾತಿಗೆ ಅನುಗುಣವಾಗಿ ಮೀಸಲಾತಿ ರಚಿಸಲಾಗಿದೆ. ಜಾತಿಗಳು ಬೆಂಕಿಯಾದರೆ ಮೀಸಲಾತಿ ಅದರ ಹೊಗೆಯಂತಿದೆ ಎಂದರು.
ಸಂತ ಸೇವಾಲಾಲ್ ಜಯಂತಿ ಆಚರಣೆ ಸಮಿತಿ ಅಧ್ಯಕ್ಷ ಎನ್.ಜಿ.ಚಂದ್ರಶೇಖರ ನಾಯ್ಕ, ಪಪಂ ಪ್ರಭಾರ ಅಧ್ಯಕ್ಷ ಹೊಸಕೆರೆ ರಮೇಶ್, ತೋಟಗಾರಿಕೆ ಮಹಾವಿದ್ಯಾಲಯದ ಸಹಪ್ರಾಧ್ಯಪಕ ಡಾ.ವೈ.ಕಾಂತರಾಜ್, ಡಾ.ಎಂ.ಜಗದೀಶ್ ನಾಯ್ಕ, ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ, ಬಿಎಸ್ಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಲೋಕವಳ್ಳಿ ರಮೇಶ್, ಶಿಕ್ಷಕರಾದ ಕೃಷ್ಣನಾಯ್ಕ ದೊಡ್ಡನಂದಿ, ಗೌರಿಬಾಯಿ, ಕೃಷ್ಣ ನಾಯ್ಕ ಇತರರಿದ್ದರು.