

ಬೆಳಗಾವಿ: ಲೋಕಸಭಾ ಚುನಾವಣೆ ಎಂದರೆ ಇಡೀ ದೇಶದ ಭವಿಷ್ಯ ರೂಪಿಸುವ ಚುನಾವಣೆ. ಹಾಗಾಗಿ ಭಾರತವನ್ನು ಸೂಪರ್ ಪವರ್ ಮಾಡಲು ಬಿಜೆಪಿಗೆ ಮತ ನೀಡಬೇಕು ಎಂದು ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಕರೆ ನೀಡಿದರು.
ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಹಾಪುರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ನಾನು ನಾಮಪತ್ರ ಸಲ್ಲಿಕೆ ಮಾಡುವ ದಿನ ಜನ ಬಂದಿದನ್ನು ನೋಡಿದರೆ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ತೀರ್ಮಾನ ಮಾಡಿದ್ದಾರೆ. ದೇಶದ ಅಭಿವೃದ್ಧಿ, ಭದ್ರತೆ ನೋಡಿ ಮತ ನೀಡಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ 10 ವರ್ಷದ ಆಡಳಿತದಲ್ಲಿ ಭಾರತದಲ್ಲಿ ಅಭಿವೃದ್ಧಿ ಪಡಿಸಿದ್ದಾರೆ. ಮುಂದಿನ 10-15 ವರ್ಷದಲ್ಲಿ ಇಡೀ ಜಗತ್ತಿನಲ್ಲಿ ಭಾರತ ಸೂಪರ್ ಪವರ್ ದೇಶ ಆಗಲಿದೆ ಎಂದರು.
ಶಾಸಕ ಅಭಯ ಪಾಟೀಲ ಮಾತನಾಡಿ, ಜಗದೀಶ ಶೆಟ್ಟರ್ ಸಿಎಂ ಆಗಿ, ಸಚಿವರಾಗಿ, ವಿಧಾನಸಭಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅವರು ಲೋಕಸಭೆಗೆ ಆಯ್ಕೆಯಾದರೆ ಬೆಳಗಾವಿ ಬಹಳಷ್ಟು ಅಭಿವೃದ್ಧಿ ಆಗಲಿದೆ. ಹಾಗಾಗಿ ಬಿಜೆಪಿಗೆ ಮತ ನೀಡಬೇಕು ಎಂದರು.
ಪಾಲಿಕೆ ಸದಸ್ಯರಾದ ಗಿರೀಶ ದೊಂಗಡಿ, ಪ್ರಮುಖರಾದ ಚಂದ್ರಶೇಖರ ಬೆಂಬಳಗಿ, ಬಾಬಣ್ಣ ಕಿತ್ತೂರು ಹಾಗೂ ದಾನಮ್ಮದೇವಿ ಬಳಗದ ಮಹಿಳೆಯರು ಇದ್ದರು.