ಹಾವು ಕಚ್ಚಿದರೆ ತಜ್ಞ ವೈದ್ಯರ ಬಳಿ ಚಿಕಿತ್ಸೆ ಪಡೆಯಿರಿ

HUN-NOV-9-1(DEED PROGRAMME)
ಹುಣಸೂರು ನಗರದ ಡೀಡ್ ಸಂಸ್ಥೆಯಲ್ಲಿ ಹಾವುಗಳ ಕುರಿತಾಗಿ ರತ್ನಪುರಿ ಗ್ರಾಮದ ಲೇಯಾನ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಶರಣ್ಯ ಮಾಹಿತಿ ನೀಡಿದರು. ಆದಿವಾಸಿ ಮುಖಂಡರಾದ ವಿಠಲ್ ನಾಣಾಚ್ಚಿ, ಹರ್ಷ, ಜಯಪ್ಪ, ಲಕ್ಷ್ಮಿ, ಕೆಂಪಮ್ಮ, ಸೀತೆ ಇತರರಿದ್ದಾರೆ.
Published on

ಹುಣಸೂರು : ಹಾವು ಕಚ್ಚಿದರೆ ಕೈ ಔಷಧವೆಂದು ಚಿಕಿತ್ಸೆ ಪಡೆಯುವುದನ್ನು ಬಿಟ್ಟು ತಜ್ಞ ವೈದ್ಯರಲ್ಲಿ ಚಿಕಿತ್ಸೆ ಪಡೆಯಬೇಕೆಂದು ತಾಲೂಕಿನ ರತ್ನಪುರಿ ಗ್ರಾಮದ ಲೇಯಾನ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಶರಣ್ಯ ತಿಳಿಸಿದರು.

ನಗರದ ಡೀಡ್ ಸಂಸ್ಥೆಯಲ್ಲಿ ಆದಿವಾಸಿಗಳಿಗೆ ಹಾವುಗಳ ಸಂರಕ್ಷಣೆ, ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ರತ್ನಪುರಿಯ ಲೇಯಾನ ಸಂಸ್ಥೆಯಲ್ಲಿ 340ಕ್ಕೂ ಹೆಚ್ಚು ಹಾವುಗಳನ್ನು ಸಂರಕ್ಷಿಸಲಾಗುತ್ತಿದೆ. ಭಾರತದಲ್ಲಿ 360 ಜಾತಿಯ ಹಾವುಗಳಿವೆ. ಅವುಗಳಲ್ಲಿ 60 ಜಾತಿಯ ಹಾವುಗಳು ವಿಷಕಾರಕವಾಗಿವೆ. ಕರ್ನಾಟಕದಲ್ಲಿ 8 ಜಾತಿಯ ವಿಷದ ಹಾವುಗಳಿವೆ. ಹುಣಸೂರಿನಲ್ಲಿ 4 ಜಾತಿಯ ವಿಷದ ಹಾವುಗಳಿವೆ. ಹಾವಿಗೆ ಮನುಷ್ಯ ಆಹಾರವಲ್ಲ. ಅವು ನಮ್ಮನ್ನು ಹುಡುಕಿ ಬಂದು ಕಚ್ಚಲ್ಲ. ಕಪ್ಪೆ, ಇಲಿ ಹುಡುಕಿ ಕಚ್ಚಿ ವಿಷ ಸುರಿಸಿ ಸಾಯಿಸಿ ತಿನ್ನುತ್ತವೆ. ಆದ್ದರಿಂದ ತೋಟ, ಹೊಲ ಗದ್ದೆ, ಹಿತ್ತಲಿನಲ್ಲಿ ತಿರುಗಾಡುವಾಗ ಎಚ್ಚರವಿರಬೇಕು. ಹಾವು ಕಂಡ ತಕ್ಷಣ ಕೊಲ್ಲಬಾರದು ಎಂದು ಸಲಹೆ ನೀಡಿದರು.

ಹಾವಿನ ವಿಷ ತೆಗೆದು ಕುದುರೆಗೆ ಇಂಜೆಕ್ಷನ್ ಮಾಡಿ ಅಲ್ಲಿ ಉಂಟಾಗುವ ಪ್ರತಿರೋಧಕ ವಿಷ ಸಂಗ್ರಹಿಸಿ ಹಾವು ಕಡಿದು ವಿಷವೇರಿದ ಮನುಷ್ಯರಿಗೆ ಗ್ಲುಕೋಸ್ ನೀಡುವ ಮೂಲಕ ಗುಣಪಡಿಸಬಹುದಾಗಿದೆ. ಗ್ರಾಮೀಣ ಭಾಗಗಳಲ್ಲಿ ಗಿಡಮೂಲಿಕೆಗಳೆಂದು ಹೇಳಲ್ಪಡುವ ಕೈ ಔಷಧಕ್ಕೆ ಜನರು ಮೊರೆಹೋಗುವ ಮೂಲಕ ಜೀವಕ್ಕೆ ಅಪಾಯ ತಂದುಕೊಳ್ಳುತ್ತಾರೆ. ಇದು ನಿಲ್ಲಬೇಕಿದೆ. ಹಾವು ಕಚ್ಚಿದ ಜಾಗದಲ್ಲಿ ವ್ಯಕ್ತಿಯೊಬ್ಬರು ಬಾಯಿಂದ ಕಚ್ಚಿ ವಿಷ ಹೊರತೆಗೆಯುವುದು ತಪ್ಪು. ಅದು ಬಾಯಿ ಹಾಕಿದ ವ್ಯಕ್ತಿಯ ಜೀವಕ್ಕೂ ಸಂಚಕಾರ ತರುತ್ತದೆ. ಹಾವು ಹೊಡೆದು ಸಾಯಿಸಿದರೆ 7ವರ್ಷ ಜೈಲು ಶಿಕ್ಷೆ ಇದೆ ಎಂದು ಮಾಹಿತಿ ನೀಡಿದರು.

ಸಂವಾದದಲ್ಲಿ ಹಾವು ಕಡಿತಕ್ಕೆ ಕೈ ಔಷಧ ನೀಡುವ ಕೆರೆಹಾಡಿ ಅಣ್ಣಯ್ಯ, ಹಾವುಗಳು ಇಲಿಗಳ ಬಗ್ಗೆ ಅರಿವಿರುವ ಇರುಳಿಗ ಮುಖಂಡ, ಆದಿವಾಸಿ ಪಾರ್ಲಿಮೆಂಟ್ ಅಧ್ಯಕ್ಷ ಹೆಮ್ಮಿಗೆ ಹರ್ಷ, ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಜಯಪ್ಪ, ಬೆಟ್ಟಕುರುಬ ಪಾರಂಪರಿಕ ಸಂಘದ ವಿಠಲ್ ನಾಣಾಚ್ಚಿ, ಆದಿವಾಸಿ ಮಹಿಳಾ ಸಂಘದ ಅಧ್ಯಕ್ಷೆ ಭರತವಾಡಿ ಲಕ್ಷ್ಮೀ, ನೇರಳಕುಪ್ಪೆ ಹಾಡಿಯ ಸೀತೆ, ಕೆಂಪಮ್ಮ, ಕೆರೆಹಾಡಿಯ ಶಿವಣ್ಣ, ಡೀಡ್ ಸಂಸ್ಥೆಯ ಡಾ.ಎಸ್.ಶ್ರೀಕಾಂತ್, ಎ.ಪ್ರಕಾಶ್, ಶಾರದಾ ವಳಗೆರೆ, ಲೇಯಾನ ಸಂಸ್ಥೆಯ ಶಾಲಿನಿ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net