

ಶಿವಮೊಗ್ಗ: ಅಡಕೆಯೊಂದನ್ನೇ ನಂಬಿದರೆ ಭವಿಷ್ಯದಲ್ಲಿ ರೈತರಿಗೆ ಸಂಕಷ್ಟ ಎದುರಾಗುವ ಸಾಧ್ಯತೆಯೇ ಹೆಚ್ಚು. ಹಾಗಾಗಿ ಅಡಕೆಗೆ ಪರ್ಯಾಯವಾಗಿ ಮಿಶ್ರಬೆಳೆ ಬೆಳೆದು ಆರ್ಥಿಕವಾಗಿ ಸದೃಢರಾಗುವತ್ತ ರೈತರು ಚಿಂತನೆ ಮಾಡಬೇಕಿದೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ, ಪ್ರಗತಿಪರ ರೈತ ಟಿ.ಎನ್.ರಮೇಶ್ ಸಲಹೆ ನೀಡಿದರು.
ಕುವೆಂಪು ರಂಗಮಂದಿರದಲ್ಲಿ ಶನಿವಾರ ಶಿವಮೊಗ್ಗ ಮಹಾನಗರ ಪಾಲಿಕೆ, ರೈತ ದಸರಾ ಸಮಿತಿ, ಕೃಷಿ ಹಾಗೂ ಕೃಷಿಗೆ ಸಂಬಂಧಪಟ್ಟ ಇಲಾಖೆಗಳು, ಶಿಮುಲ್, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ರೈತ ದಸರಾ ವೇದಿಕೆ ಕಾರ್ಯಕ್ರಮ ಉದ್ವಾಟಿಸಿ ಮಾತನಾಡಿದರು.
ಬೆಳೆದಂತಹ ಬೆಳೆಗಳನ್ನು ನಾವೇ ಮೌಲ್ಯವರ್ಧನೆ ಮಾಡಿದಾಗ ಉತ್ತಮ ಬೆಲೆ ಸಿಗಲಿದೆ. ಬೆಳೆಗಳಿಗೆ ನಾವೇ ಮಾರುಕಟ್ಟೆ ಮಾಡಿಕೊಳ್ಳಬೇಕು. ಪೂರ್ವಜರು ನಮಗೆ ವಿಶೇಷವಾಗಿ ಕೃಷಿಯನ್ನು ಬಿಟ್ಟು ಹೋಗಿದ್ದಾರೆ. ಅದನ್ನು ಮಾರಾಟ ಮಾಡದೇ ಉಳಿಸಿ ಬೆಳೆಸಿಕೊಂಡು ಹೋಗಬೇಕು. ಯುವ ಸಮೂಹಕ್ಕೆ ಉದ್ಯೋಗ ಮುಖ್ಯ. ಆದರೆ ಉದ್ಯೋಗದ ಜತೆಗೆ ಕೃಷಿ ಭೂಮಿ ಉಳಿಸಬೇಕು. ಇಂದಿನ ಯುವಕರಿಗೆ ಕೃಷಿ ಎಂಬುದೇ ಮರೆತು ಹೋಗಿದ್ದು ಪ್ರೌಢಶಾಲೆ ಹಂತದಲ್ಲೇ ಮಕ್ಕಳಿಗೆ ಕೃಷಿ ಬಗ್ಗೆ ಅರಿವು ಮೂಡಿಸಬೇಕು. ಈ ಬಗ್ಗೆ ಸರ್ಕಾರಕ್ಕೂ ಮನವಿ ಮಾಡಿಕೊಳ್ಳಲಾಗಿದೆ. ಕೃಷಿಯಲ್ಲಿ ವಿಭಿನ್ನವಾಗಿ ಯೋಚನೆ ಮಾಡಿದಾಗ ಆರ್ಥಿಕವಾಗಿ ಸಬಲರಾಗಬಹುದು ಎಂದು ಹೇಳಿದರು.
ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಮಾತನಾಡಿ, ಅನ್ನ ಕೊಡುವ ರೈತ ಮತ್ತು ಗಡಿ ಕಾಯುವ ಯೋಧರಿಂದ ಈ ದೇಶ ಸುಭಿಕ್ಷವಾಗಿದೆ. ರೈತ ಯಾವತ್ತೂ ಬೇಡಿದ ಕುಲವಲ್ಲ. ಕೈಎತ್ತಿ ಕೊಟ್ಟ ಕುಲ. ಯಾವ ಫಲಾಪೇಕ್ಷೆ ಇಲ್ಲದೆ ರೈತ ತನ್ನ ಕಾರ್ಯ ಮಾಡುತ್ತಾನೆ. ನಾವು ಹಿಂದಿನಂತೆ ಸಮಗ್ರ ಕೃಷಿ ಕಡೆ ಮುಖ ಮಾಡಬೇಕು. ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಿ ಶುದ್ಧವಾದ ಆಹಾರವನ್ನು ಬೆಳೆಯಬೇಕು. ಜನತೆಗೆ ಕೊಡಬೇಕು. ಇದು ನಮ್ಮ ಧರ್ಮ. ನಾವು ಬೆಳೆದ ಬೆಳೆಗಳನ್ನು ನಾವೇ ಪರಿಷ್ಕರಣೆ ಮಾಡಿ ಮಾರಾಟ ಮಾಡಬೇಕು. ಆಗ ಮಾತ್ರ ರೈತ ಲಾಭವನ್ನು ನೋಡಲು ಸಾಧ್ಯ. ಈ ನಿಟ್ಟಿನಲ್ಲಿ ರೈತರು ಕಾರ್ಯೋನ್ಮುಖರಾಗಬೇಕು ಎಂದು ಕರೆ ನೀಡಿದರು.
ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಹಾಗೂ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿದರು. ಮುಖಂಡ ಎಚ್.ಸಿ.ಯೋಗೇಶ್, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ರುದ್ರೇಗೌಡ ಎಫ್. ಚನ್ನಗೌಡ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಚ್.ಎನ್.ನಾಗರಾಜ್, ಪಾಲಿಕೆ ಕಂದಾಯಾಧಿಕಾರಿ ನಾಗೇಂದ್ರ ಉಪಸ್ಥಿತರಿದ್ದರು.