ಭಾಷೆಗೆ ಧಕ್ಕೆ ಎದುರಾದರೆ ಹೋರಾಟ ಅನಿವಾರ್ಯ

Published on

 ಸಾಹಿತ್ಯ ಅಕಾಡೆಮಿ ಸದಸ್ಯೆ, ಹೋರಾಟಗಾರ್ತಿ ಅಕೈ ಪದ್ಮಶಾಲಿ ಹೇಳಿಕೆ |  ಸಾಹಿತ್ಯದಲ್ಲಿ ಸಮ ಸಮಾಜದ ಆಶಯ ಕುರಿತ ಉಪನ್ಯಾಸ ಕಾರ್ಯಾಗಾರ

ವಿಜಯವಾಣಿ ಸುದ್ದಿಜಾಲ ಶಿಡ್ಲಘಟ್ಟ

ನಮ್ಮ ಭಾಷೆ, ನಮ್ಮ ವಿಚಾರ, ನಮ್ಮತನಕ್ಕೆ ಧಕ್ಕೆ ಉಂಟಾದಾಗ ಧ್ವನಿ ಎತ್ತಬೇಕು. ಧ್ವನಿ ಎತ್ತದಿದ್ದಲ್ಲಿ ನಮ್ಮತನವನ್ನು ನಾವು ಕಳೆದುಕೊಳ್ಳುತ್ತೇವೆ. ನಮ್ಮ ನಾಡಿನಲ್ಲಿ ನಾವೇ ಪರಕೀಯರಂತೆ ನಿರಭಿಮಾನದ ಬದುಕು ಸಾಗಿಸಬೇಕಾಗುತ್ತದೆ ಎಂದು ಸಾಹಿತ್ಯ ಅಕಾಡೆಮಿ ಸದಸ್ಯೆ ಹಾಗೂ ಹೋರಾಟಗಾರ್ತಿ ಅಕೈ ಪದ್ಮಶಾಲಿ ಹೇಳಿದರು.

ನಗರದ ಡಾಲ್ಫಿನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಚಿಕ್ಕಬಳ್ಳಾಪುರ ಚಕೋರ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ಆಯೋಜಿಸಿದ್ದ ‘ಸಾಹಿತ್ಯದಲ್ಲಿ ಸಮ ಸಮಾಜದ ಆಶಯಗಳು ಮತ್ತು ಕುವೆಂಪು ಮಂತ್ರ ಮಾಂಗಲ್ಯ’ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಮಿಳು ಚಿತ್ರನಟ ಕಮಲ್ ಹಾಸನ್ ಅವರು ತಮಿಳು ಭಾಷೆಯಿಂದ ಕನ್ನಡ ಹುಟ್ಟಿತು ಎಂದು ನೀಡಿರುವ ಹೇಳಿಕೆಯನ್ನು ಕನ್ನಡ ನಾಡಿನ ಸಾಮಾನ್ಯ ಪ್ರಜೆಗಳಾಗಿ ನಾವು ಒಪ್ಪಲು ಸಾಧ್ಯವಿಲ್ಲ. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತಿದೆ. ಎಂಟು ಜ್ಞಾನಪೀಠ ಪ್ರಶಸ್ತಿಗಳು ಕನ್ನಡಕ್ಕೆ ಸಿಕ್ಕ ಹೆಗ್ಗಳಿಕೆ ನಮ್ಮ ಭಾಷೆ, ಸಾಹಿತ್ಯಕ್ಕೆ ಇದೆ ಎಂದರು.

ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಸಮಾಜದಲ್ಲಿ ಒಂದು ರೀತಿಯ ನಿರ್ಲಜ್ಜ ಭಾವ ಒಂದು ಕಾಲದಲ್ಲಿತ್ತು. ಸಂವಿಧಾನದಲ್ಲೂ ನಾವು ಅಪರಾಧಿಗಳೇ ಆಗಿದ್ದೆವು. ಆದರೆ, ನಾವು ಅದರ ವಿರುದ್ಧ ಹೋರಾಟ ಮಾಡಿದ ಫಲ ಇಂದು ನಾವೂ ಸಮಾಜದ ಭಾಗವಾಗಿದ್ದೇವೆ ಎಂದರು.

ನಾನು ಬರೆದ ಕರುಣೆಗೊಂದು ಸವಾಲು ಅಕೈ ಪುಸ್ತಕಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆಯಲ್ಲದೆ, ರಾಜ್ಯದ ಅನೇಕ ವಿಶ್ವವಿದ್ಯಾಲಯಗಳು ಅದನ್ನು ಪಠ್ಯವನ್ನಾಗಿ ಅಳವಡಿಸಿಕೊಂಡಿರುವುದಕ್ಕೆ ಸಂತಸವಿದೆ. ಇದು ಹೋರಾಟಗಾರರಿಗೆ, ಶೋಷಿತರಿಗೆ, ಲೈಂಗಿಕ ಅಲ್ಪಸಂಖ್ಯಾತರಿಗೆ ಮಾದರಿಯೂ, ಪ್ರೇರಣೆಯೂ ಆಗಲಿ ಎಂದು ಆಶಿಸಿದರು.

ಕನ್ನಡ ಉಪನ್ಯಾಸಕ ಎಂ.ಮುನಿರಾಜು ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ವಾಲ್ಮೀಕಿ ರಾಮಾಯಣದಿಂದ ಹಿಡಿದು ಪಂಪ, ಬಸವಣ್ಣ, ಕನಕದಾಸ, ಸರ್ವಜ್ಞ ಹಾಗೂ ಆಧುನಿಕ ಸಾಹಿತ್ಯದ ಕುವೆಂಪು ಅವರ ಆದಿಯಾಗಿ ಸಮ ಸಮಾಜ ಕುರಿತು ಜಾಗೃತಿ ಮೂಡಿಸಿರುವುದು ಸಾಹಿತ್ಯ ಕ್ಷೇತ್ರದ ಹೆಮ್ಮೆಯ ವಿಚಾರ ಎಂದರು.

ಸಮಾಜದಲ್ಲಿ ಇರುವ ಅಸಮಾನತೆಯನ್ನು ಮತ್ತು ಮದುವೆಗಳ ಆಡುಂಬೊಲ ನಿವಾರಿಸಲು ಕುವೆಂಪು ಅವರು ಸರಳ, ಸುಂದರ ಮಂತ್ರ ಮಾಂಗಲ್ಯದ ಮೂಲಕ ಮದುವೆ ಆಗಬೇಕೆಂದು ನೀಡಿರುವ ಮಾರ್ಗ ಇಂದಿಗೂ ಆದರ್ಶವಾಗಿದೆ. ಆ ಮೂಲಕ ಮೌಢ್ಯ, ಮೂಢ ನಂಬಿಕೆ, ಅಂಧಾಚಾರಗಳಿಗೆ ಮನಸೋಲದೆ ಜಾತಿ, ಮತ, ಧರ್ಮ, ಭಾಷೆ, ದೇಶ ಯಾವುದರ ಹಂಗಿಲ್ಲದೆ ನಡೆಸಲು ಕುವೆಂಪು ಮಂತ್ರ ಮಾಗಲ್ಯ ಮಾದರಿ ಆಗಿದೆ ಎಂದರು.

ಕನ್ನಡ ಶಿಕ್ಷಕ ವಿ.ನಾರಾಯಣಸ್ವಾಮಿ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ಡಾಲ್ಫಿನ್ಸ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪ್ರೊ.ಎನ್.ಶ್ರೀನಿವಾಸಮೂರ್ತಿ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಸ್.ವಿ.ನಾಗರಾಜರಾವ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಕಸಾಪ ತಾಲೂಕು ಅಧ್ಯಕ್ಷ ನಾರಾಯಣಸ್ವಾಮಿ, ಕನ್ನಡ ಕಸ್ತೂರಿ ಜನಪರ ವೇದಿಕೆ ಜಿಲ್ಲಾಧ್ಯಕ್ಷ ರಾಮಾಂಜಿ, ಚಕೋರ ಸಾಹಿತ್ಯ ವಿಚಾರ ವೇದಿಕೆ ಜಿಲ್ಲಾ ಸಂಚಾಲಕ ಪಾತಮುತ್ತಕಹಳ್ಳಿ ಮು.ಚಲಪತಿಗೌಡ, ಈಧರೆ ಪ್ರಕಾಶ್ ಇತರರು ಇದ್ದರು.

22, ಎಸ್ ಡಿ ಎಲ್ ಪಿ 01

ಶಿಡ್ಲಘಟ್ಟದ ಡಾಲ್ಫಿನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಾಹಿತ್ಯದಲ್ಲಿ ಸಮ ಸಮಾಜದ ಆಶಯಗಳು ಮತ್ತು ಕುವೆಂಪು ಮಂತ್ರ ಮಾಂಗಲ್ಯ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಉದ್ಘಾಟಿಸಿದರು. ಪ್ರಾಂಶುಪಾಲ ಪ್ರೊ.ಎನ್.ಶ್ರೀನಿವಾಸಮೂರ್ತಿ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಸ್.ವಿ.ನಾಗರಾಜರಾವ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net